ಮೊದಲ ಮಳೆಗೆ ತಂಪಾಗಲಿಲ್ಲ ಮಲೆನಾಡ ನಗರಿ
ಶಿವಮೊಗ್ಗ, ಮಾ. 5: ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದು ಹೋಗಿದ್ದ, ಅಕ್ಷರಶಃ ಕಾದ ಕಾವಲಿಯಂತಾಗಿ ಪರಿಣಮಿಸಿದ್ದ ‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗ ನಗರಕ್ಕೆ ತಡವಾಗಿಯಾದರೂ ಮಳೆರಾಯ ಕಾಲಿಟ್ಟಿದ್ದಾನೆ. ಮಂಗಳವಾರ ಸಂಜೆ ನಗರದಲ್ಲಿ ಸಣ್ಣ ಪ್ರಮಾಣ ಮಳೆಯಾಯಿತು. ಬೇಸಿಗೆಯ ಮೊದಲ ಮಳೆಗೆ ನಾಗರಿಕರು ನಿಟ್ಟುಸಿರು ಬಿಟ್ಟರು. ಮಂಗಳವಾರ ಕೂಡ ನಗರದಲ್ಲಿ ಬಿಸಿಲಿನ ತಾಪ ಜೋರಾಗಿಯೇ ಇತ್ತು. ಆದರೆ ಸುಮಾರು 5 ಗಂಟೆಯ ವೇಳೆಗೆ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿತು. ಗುಡುಗು ಸಹಿತ ಮಳೆ ಬೀಳಲಾರಂಭಿಸಿತು. ಆದರೆ ಕೆಲವೇ ನಿಮಿಷಗಳ ಕಾಲ ಈ ಮಳೆ ಬಿದ್ದಿತು. ಭಾರೀ ಮಳೆಯ ನಿರೀಕ್ಷಿಯಲ್ಲಿದ್ದ ನಾಗರಿಕರು ನಿರಾಸೆಗೊಳ್ಳುವಂತಾಯಿತು.
ಏರುತ್ತಿರುವ ತಾಪಮಾನ
ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ನಗರದಲ್ಲಿ 38 ಡಿಗ್ರಿಯಿಂದ 41 ಡಿಗ್ರಿಯವರೆಗೆ ಉಷ್ಣಾಂಶ ದಾಖಲಾಗುತ್ತಿದೆ. ರಣ ಬಿಸಿಲಿಗೆ ಖ್ಯಾತಿಯಾದ ಗುಲ್ಬರ್ಗಾ, ಬಳ್ಳಾರಿ, ರಾಯಚೂರಿನಂತಹ ಬಯಲುನಾಡುಗಳ ರೀತಿಯಲ್ಲಿ ನಗರದಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಬಿಸಿಲ ಬೇಗೆಯಿಂದ ನಗರದ ನಾಗರಿಕರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನಾಗರಿಕರು ಮನೆ ಬಿಟ್ಟು ಹೊರಬರಲು ಆಗದ ಮಟ್ಟಕ್ಕೆ ಬಿಸಿಲು ಬೀಳುತ್ತಿದೆ. ಮಧ್ಯಾಹ್ನದ ವೇಳೆಯಲ್ಲಂತೂ ಬಿರು ಬಿಸಿಲಿನ ಕಾರಣದಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಜನ-ವಾಹನ ಸಂಚಾರ ವಿರಳವಾಗಿರುವುದು ಕಂಡುಬರುತ್ತಿದೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ನಾಗರಿಕರ ನಿದ್ದೆಗೆಡುವಂತೆ ಮಾಡಿದೆ. ರಾಜ್ಯದ ಹಲವೆಡೆ ಅಕಾಲಿಕ ಮಳೆಯಾಗುತ್ತಿದ್ದರೂ ನಗರದಲ್ಲಿ ಮಾತ್ರ ಮಳೆಯಾಗಿರಲಿಲ್ಲ. ನಾಗರಿಕರು ಕೂಡ ಯಾವಾಗ ಮಳೆಯಾಗುವುದೋ ಎಂಬ ನಿರೀಕ್ಷೆಯಲ್ಲಿದ್ದರು. ಮಂಗಳವಾರ ಬೇಸಿಗೆಯ ಮೊದಲ ಮಳೆ ನಗರಕ್ಕೆ ಕಾಲಿಟ್ಟಿದೆ. ಇನ್ನೂ ಕೆಲ ದಿನಗಳ ಕಾಲ ಈ ಮಳೆ ಈಗಿಯೇ ಮುಂದುವರಿಯಲಿ ಎಂಬುವುದು ನಾಗರಿಕರ ಆಶಯವಾಗಿದೆ.