×
Ad

ವಿಧಾನಸೌಧದ ಮಹಡಿಯಲ್ಲೇ ಡೀಲ್!

Update: 2016-04-05 23:49 IST

ಬೆಂಗಳೂರು, ಎ.5: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ವಿಧಾನಸೌಧದ 3ನೆ ಮಹಡಿಯಲ್ಲಿಯೇ ಪ್ರಶ್ನೆಪತ್ರಿಕೆ ಸೋರಿಕೆಯ ಡೀಲ್ ನಡೆದಿರುವುದು ಬಹಿರಂಗಗೊಂಡಿದೆ.

ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ರ ಕಚೇರಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯ ಡೀಲ್ ನಡೆದಿರುವ ಸ್ಫೋಟಕ ಮಾಹಿತಿ ಸಿಐಡಿ ಪೊಲೀಸರು ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ.

 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ವಿಶೇಷಾಧಿಕಾರಿ ಓಬಲರಾಜು ಅವರು ಕಚೇರಿಯ ದೂರವಾಣಿ ಬಳಕೆ ಮಾಡಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆಯ ಡೀಲ್ ಕುದುರಿಸಿದ್ದು ಅಲ್ಲದೆ, ಅವರ ಆಪ್ತ ಸಂಬಂಧಿ ಹಾಗೂ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ರುದ್ರಪ್ಪನನ್ನು ಮಾ.17 ಗುರುವಾರದಂದು ಕಚೇರಿಗೆ ಬರಮಾಡಿಕೊಂಡು ಚರ್ಚೆ ಮಾಡಿದ್ದಾರೆ.

ತದನಂತರ ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್‌ಪಿನ್ ಹಾಗೂ ವಿಜಯನಗರ ಕೇಂಬ್ರಿಡ್ಜ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್‌ನನ್ನು ಸಂಪರ್ಕಿಸಿ, ಸಮಗ್ರವಾಗಿ ಚರ್ಚಿಸಿ ಮರುದಿನ ಅಂದರೆ ಮಾ. 18 ಶುಕ್ರವಾರ ಪ್ರಶ್ನೆ ಪತ್ರಿಕೆ ಪಡೆಯಲು 10 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಮಂಜುನಾಥ್‌ಗೆ ಮುಂಗಡವಾಗಿ 3 ಲಕ್ಷ ರೂ. ನಗದು ನೀಡಿ, ಉಳಿದ 7 ಲಕ್ಷ ರೂ.ಯನ್ನು ತಲಾ 3.5ಲಕ್ಷ ರೂ.ಯಂತೆ ಓಬಳರಾಜು ಮತ್ತು ರುದ್ರಪ್ಪ ಮಂಜುನಾಥ್‌ನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂದು ಸಿಐಡಿ ಮೂಲಗಳು ಹೇಳಿವೆ.

ಒಂದೇ ತಾಸಿನಲ್ಲಿ 10 ಲಕ್ಷ ರೂ. ಬ್ಯಾಂಕ್ ಖಾತೆ ಮುಟ್ಟುಗೋಲು

ಪ್ರಮುಖ ಆರೋಪಿ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಎಲ್‌ಐಸಿ ಏಜೆಂಟ್ ಮಂಜುನಾಥ್ ಪ್ರಶ್ನೆಪತ್ರಿಕೆಯ ಪತ್ರಿಗಳನ್ನು ಮಾರಾಟ ಮಾಡಿ ಒಂದು ಗಂಟೆಯಲ್ಲಿ 10 ಲಕ್ಷ ರೂ. ಪಡೆದಿದ್ದಾನೆ ಎಂದು ಹೇಳಲಾಗಿದ್ದು, ಸದ್ಯಕ್ಕೆ ಆತನ ಬ್ಯಾಂಕ್ ಖಾತೆಯನ್ನು ಸಿಐಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಒಬ್ಬ ವಿದ್ಯಾರ್ಥಿಯಿಂದ 10 ಸಾವಿರ ರೂ. ಪಡೆದಿರುವ ಮಾಹಿತಿಯೂ ಬಂದಿದ್ದು, ಮಲ್ಲೇಶ್ವರಂನ ಕಾಲೇಜೊಂದರಲ್ಲಿ ಮಂಜುನಾಥ್ ಪತ್ನಿ ಉಪನ್ಯಾಸಕಿಯಾಗಿದ್ದು, ಆಕೆಯೂ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಸಿಐಡಿ ಅಧಿಕಾರಿಗಳು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News