ರಾಜ್ಯದಲ್ಲಿ ಎರಡು ದಿನ ವಾಟ್ಸ್ ಆಪ್ ನಿಷೇಧ !
ಬೆಂಗಳೂರು, ಎ. 6: ಇದೆಂತಹಾ ವಿಚಿತ್ರ ಐಡಿಯಾ ಎಂದು ನೀವು ಕೇಳಬಹುದು ?
ಆದರೆ ಕರ್ನಾಟಕ ಪಿಯು ಮಂಡಳಿ ಪಾಲಿಗೆ ಇದು ವಿಚಿತ್ರ ಅಲ್ಲ. ಎಪ್ರಿಲ್ ೧೨ ರಂದು ನಡೆಯಲಿರುವ ರಸಾಯನ ಶಾಸ್ತ್ರ ಮರು ಪರೀಕ್ಷೆ ಯಾವುದೇ ಕಾರಣಕ್ಕೂ ವಿಫ಼ಲವಾಗಬಾರದೆಂದು ಪಣ ತೊಟ್ಟಿರುವ ಮಂಡಳಿ ಇದಕ್ಕಾಗಿ ಈ ಸಂದರ್ಭದಲ್ಲಿ ವಾಟ್ಸ್ ಆಪ್ ಗೆ ನಿಷೇಧ ಹೆರುವ ಕುರಿತೂ ಗಂಭೀರವಾಗಿ ಯೋಚಿಸುತ್ತಿದೆ !
ಈ ಹಿಂದಿನ ಸೋರಿಕೆಗೆ ವಾಟ್ಸ್ ಆಪ್ ಅನ್ನೇ ಬಳಸಿದ್ದಾರೆ ಎಂಬ ಮಾಹಿತಿ ಇರುವುದರಿಂದ ಈ ಬಾರಿ ಒಂದೆರಡು ದಿನ ವಾಟ್ಸ್ ಆಪ್ ಅನ್ನು ನಿಷೇಧಿಸಲು ಪಿಯು ಮಂಡಳಿ ಸೈಬರ್ ಕ್ರೈಮ್ ಪೊಲೀಸರಿಗೆ ಪ್ರಸ್ತಾವ ಸಲ್ಲಿಸಿದೆ ಎಂದು ತಿಳಿದು ಬಂದಿದೆ . ಇದರಿಂದ ವಿದ್ಯಾರ್ಥಿಗಳೂ ನಿರಾಳವಾಗಿ ಪರೀಕ್ಷೆ ಬರೆಯಬಹುದು ಎಂಬುದು ಮಂಡಳಿಯ ವಾದ. ಆದರೆ ಇಡೀ ರಾಜ್ಯದಲ್ಲಿ ವಾಟ್ಸ್ ಆಪ್ ನಿಷೇಧ ಮಾಡಿದರೆ ಅದೂ ಇನ್ನೊಂದು ವಿವಾದಕ್ಕೆ ಕಾರಣವಾಗಬಹುದು ಎಂಬ ಆತಂಕವೂ ಇದೆ.
" ವಾಟ್ಸ್ ಆಪ್ ಮೂಲಭೂತ ಸಂವಹನ ಸಾಧನ ಅಲ್ಲ. ನಾವು ಮೊಬೈಲ್ ನೆಟ್ವರ್ಕ್ ಜಾಮ್ ಮಾಡಲೂ ಹೇಳುತ್ತಿಲ್ಲ. ಕೇವಲ ವಾಟ್ಸ್ ಆಪ್ ಅನ್ನು ಎರಡು ದಿನ ನಿಷೇಧಿಸಲು ಕೇಳುತ್ತಿದ್ದೇವೆ " ಎಂದು ಮಂಡಳಿಯ ಮೂಲವೊಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದೆ.