×
Ad

ಅರ್ಥ ಕಳೆದುಕೊಂಡ ಬಜೆಟ್ ಮೇಲಿನ ಚರ್ಚಾ ಸಭೆ

Update: 2016-04-06 22:09 IST

 ಮಡಿಕೇರಿ, ಎ. 6 : ನಗರಸಭೆ ನಡೆಸಿದ ಬಜೆಟ್ ಮೇಲಿನ ಚರ್ಚಾ ಸಭೆ ಅರ್ಥ ಕಳೆದುಕೊಂಡಿತು. ಅದೇ ಹಳೆ ಪೈಪ್ ಲೈನ್ ಕುರಿತು ಚರ್ಚೆ, ಸದಸ್ಯರಿಗೆ ಗಾಂಧಿ ಮೈದಾನದ ಮೇಲೆ ಮತ್ತೆ ಹುಟ್ಟಿದ ಕಾಳಜಿ, ಅಪೂರ್ಣಗೊಂಡ ಹೈಟೆಕ್ ಮಾರುಕಟ್ಟೆ ಕಾಮಗಾರಿಯ ಅರಣ್ಯ ರೋಧನ, ಗೈರು ಹಾಜರಾದ ಹಿರಿಯ ಸದಸ್ಯರ ನಿರಾಸಕ್ತಿ ಇವುಗಳೆಲ್ಲ ವಿಶೇಷ ಸಭೆಯ ಔಚಿತ್ಯವನ್ನು ಪ್ರಶ್ನಿಸಿತು.

ನಗರದ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಹಲ ದಶಕಗಳ ಹಿಂದಿನ ಪೈಪ್ ಲೈನ್‌ಗಳನ್ನು ಬದಲಿಸಿ ಹೊಸ ಲೈನ್ ಅಳವಡಿಕೆಗೆ ವಿಸ್ತತ ಯೋಜನಾ ವರದಿ ತಯಾರಿಸಲು ನಗರಸಭೆೆಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಕೊಳ್ಳಬೇಕೆನ್ನುವ ಬಗ್ಗೆ ಚರ್ಚೆ ನಡೆಯಿತು.

ನಗರಸಭಾ ಅಧ್ಯಕ್ಷೆ ಪುಷ್ಪಾವತಿ ಅವರ ಅಧ್ಯಕ್ಷತೆಯಲ್ಲಿ ನಗರಸಭಾಂಗಣದಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯ ವಿಶೇಷ ಸಭೆಯಲ್ಲಿ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ವಿಷಯ ಪ್ರಸ್ತಾಪಿಸಿದರು. ಪ್ರಸ್ತುತ ನಗರದ ವಿವಿಧ ಬಡಾವಣೆಗಳಲ್ಲಿ ಇರುವ ಪೈಪ್‌ಲೈನ್‌ಗಳು ಎರಡು ಮೂರು ದಶಕಗಳಷ್ಟು ಹಳೆಯದಾಗಿದ್ದು, ನೀರಿನ ಹರಿವು ಸರಾಗವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪೈಪ್ ಲೈನ್‌ಗಳನ್ನು ಬದಲಿಸುವ ಅಗತ್ಯತೆಯ ಬಗ್ಗೆ ಸಭೆಯ ಗಮನ ಸೆಳೆೆದರು. ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಇದಕ್ಕೆ ಧ್ವನಿ ಗೂಡಿಸಿ, ಹಳೆಯ ಪೈಪ್ ಲೈನ್‌ನ ಸಾಕಷ್ಟು ಕಡೆಗಳಲ್ಲಿ ನೀರು ವೃಥಾ ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಿದರೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದೆಂದು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಪಿ.ಡಿ. ಪೊನ್ನಪ್ಪ ಮಾತನಾಡಿ, ಪ್ರಸ್ತುತ ಸಮಗ್ರ ಒಳಚರಂಡಿ ಯೋಜನೆ ಜಾರಿಗೊಳಿಸುತ್ತಿರುವ ರೀತಿಯಲ್ಲೆ ನಗರ ವ್ಯಾಪ್ತಿಯ ಹಳೆಯ ಪೈಪ್ ಲೈನ್‌ಗಳನ್ನು ಬದಲಿಸುವ ನಿಟ್ಟಿನ ಯೋಜನಾ ವರದಿ ಸಿದ್ಧಪಡಿಸುವಂತೆ ಸಲಹೆ ನೀಡಿದರು.

<ಶಿಕ್ಷಕರಿಗೆ ವೇತನ ನೀಡಿ: ಮಡಿಕೇರಿ ನಗರಸಭಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ಪ್ರಸ್ತುತ ಸಾವಿರ ರೂ.ಗಳಷ್ಟು ವೇತನವನ್ನಷ್ಟೆ ಪಾವತಿಸಲಾಗುತ್ತಿದೆ. ಶಿಕ್ಷಕರ ಸಮಸ್ಯೆ ಬಗೆಹರಿಕೆಗೆ ಅಗತ್ಯ ಪ್ರಯತ್ನ ಮಾಡುವುದು ಅವಶ್ಯವೆಂದು ಪಿ.ಡಿ. ಪೊನ್ನಪ್ಪ ತಿಳಿಸಿದರು.

<ಗಾಂಧಿ ಮೈದಾನದ ಮೇಲೆ ಪ್ರೀತಿ: ಮಕ್ಕಳ ಆಟಕ್ಕೆ ಬಳಕೆಯಾಗಬೇಕಾದ ಗಾಂಧಿ ಮೈದಾನದಲ್ಲಿ ನಗರಸಭಾ ನಿರ್ಣಯ ಮೀರಿ ವಸ್ತು ಪ್ರದರ್ಶನಕ್ಕೆ ಅವಕಾಶ ನೀಡಿರುವ ಕ್ರಮವನ್ನು ಸದಸ್ಯರು ತೀವ್ರವಾಗಿ ಖಂಡಿಸಿದರು. ಸಭೆೆಯಲ್ಲಿ ಅಧ್ಯಕ್ಷೆ ಶ್ರೀಮತಿ ಬಂಗೇರ, ಸದಸ್ಯ ಉಣ್ಣಿ ಕೃಷ್ಣ, ಪಿ.ಡಿ. ಪೊನ್ನಪ್ಪ, ಸದಸ್ಯ ಎ.ಸಿ. ದೇವಯ್ಯ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ನಗರಸಭಾ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಮಾರುಕಟ್ಟೆ ಅರಣ್ಯ ರೋದನ

ಕಳೆದ ಎರಡು ವರ್ಷಗಳಿಂದ ನೂತನ ಮಾರುಕಟ್ಟೆ ನಿರ್ಮಾಣ ಕಾರ್ಯ ಸಮರ್ಪಕವಾಗಿ ನಡೆಯದಿರುವುದನ್ನು ಖಂಡಿಸಿ, ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎಸ್‌ಡಿಪಿಐ ಸದಸ್ಯ ಕೆ.ಜಿ. ಪೀಟರ್ ಪ್ರತಿಭಟನೆಗೆ ಮುಂದಾದರು. ತಮ್ಮ ಆಸನದಲ್ಲಿ ಕೂರದೆ, ನೇರವಾಗಿ ಅಧ್ಯಕ್ಷರನ್ನು ಉದ್ದೇಶಿಸಿ, ತಾನು ಇನ್ನು ಮುಂದೆ ಮಾರ್ಕೆಟ್ ಕಾಮಗಾರಿ ಪೂರ್ಣಗೊಳ್ಳುವವರೆಗೆ ತನ್ನ ಆಸನದಲ್ಲಿ ಕೂರುವುದಿಲ್ಲ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಒಂದೆಡೆ ಮಾರ್ಕೆಟ್ ಕಾಮಗಾರಿ ನಿಂತಿದ್ದರೆ, ಮತ್ತೊಂದೆಡೆ ರಸ್ತೆ ವಿಸ್ತರಣೆಗೆ ಪೂರಕವಾಗಿ ಹಲವು ಮಂದಿ ತಮ್ಮ ಕಟ್ಟಡ ತೆರವುಗೊಳಿಸುತ್ತಿದ್ದಾರೆ. ಹೊಸ ನಿರ್ಮಾಣ ಕಾರ್ಯಕ್ಕೆ ಮರಳಿನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆಯೆ ಎಂದು ಕೆ.ಜಿ.ಪೀಟರ್ ಪ್ರಶ್ನಿಸಿದರು.

ಕೋರಂ ಕೊರತೆ

ನ ಗರಸಭಾ ವಿಶೇಷ ಸಭೆೆ ಬೆಳಗ್ಗೆ 10:30ಕ್ಕೆ ನಿಗದಿಯಾಗಿತ್ತಾದರೂ ಸದಸ್ಯರ ಕೊರತೆ ಇದ್ದುದರಿಂದ ಸಭೆ ಆರಂಭವಾಗಿರಲಿಲ್ಲ. ಆಡಳಿತ ಪಕ್ಷದ ಕೆಲವು ಸದಸ್ಯರು ಮಾತ್ರ ಆರಂಭದಲ್ಲಿ ಕಂಡು ಬಂದರಾದರೂ ವಿರೋಧ ಪಕ್ಷದವರು ಇರಲಿಲ್ಲ. ಆಡಳಿತ ಮತ್ತು ವಿರೋಧ ಪಕ್ಷದ ಕೋರಂಗೆ ಅಗತ್ಯವಾದ ಸದಸ್ಯರು ಬಂದು ಸಭೆ ಆರಂಭವಾಗುಷ್ಟರಲ್ಲಿ ಅರ್ಧ ಗಂಟೆ ಕಳೆದಿತ್ತು. ಬಜೆಟ್ ಮೇಲಿನ ವಿಶೇಷ ಚರ್ಚೆಯ ಸಭೆಯ ಮೇಲೆ ಸದಸ್ಯರ ನಿರಾಸಕ್ತಿ ಎದ್ದು ಕಾಣುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News