×
Ad

ಪೌರ ಕಾರ್ಮಿಕರ ಪಿಎಫ್ 48 ಗಂಟೆಯೊಳಗೆ ಪಾವತಿಸದಿದ್ದರೆ ಕಾನೂನು ಕ್ರಮ: ರಾಮ್‌ಪ್ರಸಾದ್

Update: 2016-04-06 22:13 IST

ಕಾರವಾರ, ಎ.6: ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ 2006ರಿಂದ ಬಾಕಿ ಉಳಿಸಿರುವ ಪಿಎಫ್ ಮತ್ತು ಇಎಸ್‌ಐ ಹಣವನ್ನು ಮುಂದಿನ 48ಗಂಟೆಗಳ ಒಳಗಾಗಿ ಪಾವತಿಸದಿದ್ದರೆ ಅಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ಎಚ್ಚರಿಕೆ ನೀಡಿದರು.

ಅವರು ಹೊರಗುತ್ತಿಗೆ ಆಧಾರದ ಪೌರಕಾರ್ಮಿಕರ ಸಮಸ್ಯೆ ಕುರಿತು ವಿವಿಧ ಸಂಘಸಂಸ್ಥೆಗಳು ಹಾಗೂ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಹೊರಗುತ್ತಿಗೆ ಆಧಾರಿತ ಪೌರಕಾರ್ಮಿಕರು ಹಲವಾರು ಬೇಡಿಕೆಗಳನ್ನು ಮುಂದಿರಿಸಿದ್ದಾರೆ. ಇವುಗಳಿಗೆ ಸಮರ್ಪಕವಾದ ಪರಿಹಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಕಾರ್ಮಿಕರ ವಿಳಾಸ ಮತ್ತು ಯಾದಿಯನ್ನು ತಯಾರಿಸಿ ಗುರುವಾರ ಸಂಜೆಯ ಒಳಗಾಗಿ ಸಲ್ಲಿಸಬೇಕು. ಹೊರ ಗುತ್ತಿಗೆ ಮೇಲೆ ನೇಮಿಸಿಕೊಂಡ ಕಾರ್ಮಿಕರಿಗೆ ಸಮವಸ್ತ್ರ ಹಾಗೂ ಸುರಕ್ಷಾ ಸಾಧನಗಳಾದ ಬೂಟು, ಕೈಗವಚ, ಮಾಸ್ಕ್, ಹೆಲ್ಮೆಟ್ ಇತ್ಯಾದಿಗಳನ್ನು ಗುತ್ತಿಗೆದಾರರು ಪೂರೈಸಿದ ಬಗ್ಗೆ ಮಾಹಿತಿಗಳನ್ನು ಪಡೆದು ವರದಿಯನ್ನು ನೀಡಬೇಕು ಎಂದು ಹೇಳಿದರು. ಪ್ರತಿ ವರ್ಷ ನಿಯಮಾನುಸಾರ ಹೆಚ್ಚಿಸಲಾಗುವ ತುಟ್ಟಿ ಭತ್ತೆಯನ್ನು ಪೌರಕಾರ್ಮಿಕರಿಗೆ ನೀಡಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

ಹೊರಗುತ್ತಿಗೆಯ ಮೇಲೆ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಕಾರ್ಮಿಕ ಇಲಾಖೆ ವತಿಯಿಂದ ಒದಗಿಸಬೇಕು. ಪೌರಕಾರ್ಮಿಕರಿಗೆ ಪ್ರತಿ ತಿಂಗಳು 5ನೆ ದಿನಾಂಕದ ಒಳಗಾಗಿ ವೇತನವನ್ನು ಪಾವತಿಸಬೇಕು. ವೇತನ ವಿಳಂಬವಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆಯ ಕೂಲಿ ಆಳುಗಳಿಗೆ ನೇರವಾಗಿ ವೇತನವನ್ನು ಪಾವತಿ ಮಾಡಲಾಗುತ್ತಿದ್ದರೆ, ಈ ಕುರಿತು ವರದಿಯನ್ನು ಸಲ್ಲಿಸಬೇಕು. ಬಹುತೇಕ ಪೌರಕಾರ್ಮಿಕರು ಪರಿಶಿಷ್ಟ ಜಾತಿ, ಜನಾಂಗಕ್ಕೆ ಸೇರಿದ್ದು, ಅವರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿಸಿದರೆ ಅಂತಹ ಗುತ್ತಿಗೆದಾರರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಅಡಿ ಪ್ರಕರಣ ದಾಖಲಿಸಲು ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News