ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆ ಪೂರ್ಣಗೊಳಿಸಿ
ಮಡಿಕೇರಿ, ಎ.6: ಮೂಲನಿವಾಸಿ ಜೇನುಕುರುಬ ಜನಾಂಗದವರ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೂಲ ನಿವಾಸಿ ಗಿರಿಜನರಿಗೆ ವಸತಿ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಮೂಲ ನಿವಾಸಿ ಗಿರಿಜನರು ಸ್ವಾವಲಂಬಿ ಬದುಕು ಕಾಣುವಂತಾಗಲು ಹಸು, ಕೋಳಿ ಸಾಕಣೆೆಗೆ ಉತ್ತೇಜನ ನೀಡುವಂತಾಗಬೇಕು. ಹಾಗೆಯೇ ಟೈಲರಿಂಗ್ ಮತ್ತಿತರ ಸಣ್ಣ ಉದ್ಯಮಗಳಲ್ಲಿ ತೊಡಗಿಸಿಕೊಂಡು ಸ್ವ-ಉದ್ಯೋಗ ಕೈಗೊಳ್ಳುವಂತಾಗಲು ಅಗತ್ಯ ತರಬೇತಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು. ಗಿರಿಜನ ಹಾಡಿಗಳಲ್ಲಿ ವಸತಿ ಮತ್ತಿತರ ಕಾಮಗಾರಿಗಳನ್ನು ಆರಂಭಿಸುವುದಕ್ಕೂ ಮೊದಲು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಈ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಅದರಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಪ್ರಮುಖರಾದ ಜೆ.ಕೆ.ರಾಮು ಮತ್ತು ಜೆ.ಪಿ.ರಾಜು ಅವರು, ವಸತಿ ಯೋಜನೆ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ಗಿರಿಜನರು ಮನೆ ನಿರ್ಮಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಸೋಮಯ್ಯ ಮಾತನಾಡಿ, ಗಿರಿಜನರು ಮನೆ ನಿರ್ಮಾಣಕ್ಕಾಗಿ ಮರಳು ತರಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಕ್ವಾಟ್ರಸ್‌ಗಾಗಿ ಮರಳು ತರುತ್ತಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ಕಾನೂನು, ಗಿರಿಜನರಿಗೆ ಮತ್ತೊಂದು ಕಾನೂನೇ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಗಿರಿಜನರ ನಡುವೆ ಹೊಂದಾಣಿಕೆ ಇದ್ದಲ್ಲಿ ಅರಣ್ಯದಲ್ಲಿನ ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸೋಮಯ್ಯ ಅವರು ಅತೃಪ್ತಿ ವ್ಯಕ್ತಪಡಿಸಿದರು. ಐಟಿಡಿಪಿ ಇಲಾಖೆ ವೀರಾಜಪೇಟೆ ತಾಲೂಕು ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಜೇನುಕುರುಬ ಸಮುದಾಯದವರಿಗೆ ಕೈಗೆತ್ತಿಕೊಳ್ಳಲಾಗಿರುವ ಮನೆಗಳ ನಿರ್ಮಾಣದಲ್ಲಿ ಅಡಿಪಾಯ ಹಂತದಲ್ಲಿ 77 ಮನೆಗಳು, ಗೋಡೆ ಹಂತದಲ್ಲಿ 90 ಮನೆಗಳು, ಮೇಲ್ಛಾವಣಿ 36 ಮನೆಗಳಿವೆ. 239 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, 820 ಬಾಕಿ ಇವೆ ಎಂದು ಮಾಹಿತಿ ನೀಡಿದರು.
ಗಿರಿಜನರಿಗೆ ಹಂದಿ, ಹಸು ಸಾಕಣೆಗೆ ಉತ್ತೇಜನ ನೀಡಲಾಗುತ್ತಿದ್ದು, ಸೋಮವಾರಪೇಟೆ ತಾಲೂಕಿನ 163 ಫಲಾನುಭವಿಗಳಲ್ಲಿ 122 ಜನರಿಗೆ ಮತ್ತು ವೀರಾಜಪೇಟೆ ತಾಲೂಕಿನ 143 ಫಲಾನುಭವಿಗಳ ಪೈಕಿ 52 ಕುಟುಂಬಕ್ಕೆ ಹಂದಿಗೂಡು ನಿರ್ಮಿಸಿಕೊಡಲಾಗಿದೆ. ಹಾಗೆಯೇ 41 ಹಸು ಸಾಕಣೆಗೆ ಫಲಾನುಭವಿಗಳಲ್ಲಿ 15 ಘಟಕಗಳು ಪೂರ್ಣಗೊಂಡಿವೆ ಎಂದರು.
ಇಂದಿರಾ ಅವರು ಮಾತನಾಡಿ, ಗೇಟ್ ಹಾಡಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಈ ಬಗ್ಗೆ ಗಮನಹರಿಸಬೇಕಿದೆ. ಸಂಚಾರಿ ಗಿರಿಜನ ಆರೋಗ್ಯ ಘಟಕದೊಂದಿಗೆ, ಗಿರಿಜನ ಆರೋಗ್ಯ ಮಹಿಳಾ ಪ್ರೇರಕಿಯರು ಸಮನ್ವಯತೆಯಿಂದ ಕಾರ್ಯನಿರ್ವಹಿಸಿಕೊಂಡು ಹೋಗುವಂತಾಗಲು ಅಗತ್ಯ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು.