ಅಧಿಕಾರಿಗಳು ಇತಿಮಿತಿ ಅರಿತು ಕಾರ್ಯನಿರ್ವಹಿಸಲಿ: ದೇಶಪಾಂಡೆ
ಕಾರವಾರ,ಎ.6: ಅಧಿಕಾರಿಗಳು ಸರಕಾರದ ನಿರ್ದೇಶನಗಳ ಪ್ರಕಾರ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರದೆ ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಸೂಚನೆ ನೀಡಿದ್ದಾರೆ.
nಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ ಎಂದರು. ಮೀನು ರಫ್ತು ಉತ್ತೇಜಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕುಮಟಾದಲ್ಲಿ ಗೇರುಬೀಜ ಉತ್ಪನ್ನ ತರಬೇತಿ ಹಾಗೂ ದಾಸ್ತಾನು ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸೂಕ್ತ ಜಮೀನು ಗುರುತಿಸಬೇಕು. ಕಾರವಾರದಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸ್ಥಾಪನೆಗೆ ಅನುಮತಿ ನೀಡಲಾಗಿದ್ದು, ಇದಕ್ಕಾಗಿ 4ಎಕ್ರೆ ಜಮೀನು ಗುರುತಿಸಬೇಕು. ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಒದಗಿಸುವ ತಾಣ ನಿರ್ಮಾಣಕ್ಕಾಗಿ 3ಎಕ್ರೆ ಜಮೀನು ಬೇಕಾಗಿದೆ. ಇದರ ನಿರ್ಮಾಣಕ್ಕಾಗಿ 2ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ. ಪ್ರವಾಸೋದ್ಯಮಕ್ಕೆ 21ಕೋಟಿ ರೂ.:
n ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೀಚ್‌ಗಳಲ್ಲಿ ಜಟ್ಟಿಗಳನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಕಾರವಾರದ ಠಾಗೋರ್ ಬೀಚ್, ಪಾವಿನಕುರ್ವೆ ಬೀಚ್, ನೇತ್ರಾಣಿ, ಮುರ್ಡೇಶ್ವರ ಸೇರಿದಂತೆ ಆಯ್ದ ಬೀಚ್‌ಗಳಲ್ಲಿ ಪ್ರವಾಸಿಗರು ಇಳಿಯಲು ಜಟ್ಟಿ ನಿರ್ಮಾಣಕ್ಕೆ ತಲಾ 2ಕೋಟಿ ರೂ. ಮಂಜೂರು ಮಾಡಲಾಗಿದೆ. ದೇವಭಾಗ್‌ಬೀಚ್‌ನಲ್ಲಿ ಸಮುದ್ರ ಕೊರತೆ ತಡೆಗೆ 4ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಕೃಷಿ ಇಲಾಖೆ: ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಬೆಳೆ ವಿಮೆ ಇತ್ಯಾದಿ ಸೌಲಭ್ಯಗಳು ಸೂಕ್ತ ಸಮಯಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಹಲವಾರು ಸೌಲಭ್ಯಗಳು ಲಭ್ಯವಿದ್ದು, ಈ ಕುರಿತು ರೈತರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ಕೆಲವು ತಾಲೂಕುಗಳಲ್ಲಿ ಕಳೆದ ಬಾರಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಬಿತ್ತನೆ ಬೀಜ ಕೊರತೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಬಿತ್ತನೆ ಬೀಜವನ್ನು ಮೊದಲೇ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಬೇಕು ಎಂದು ಹೇಳಿದರು.
nಹಾಲು ಉತ್ಪಾದನೆ ಹೆಚ್ಚಳ: ಜಿಲ್ಲೆಯಲ್ಲಿ ಕಳೆದ ವರ್ಷದ ಅವಧಿಯಲ್ಲಿ 44ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಇದರ ಪ್ರಮಾಣ 26ಸಾವಿರ ಲೀಟರ್ ಇತ್ತು. ಇನ್ನಷ್ಟು ಹಾಲು ಉತ್ಪಾದನೆ ಮಾಡಲು ಪೂರಕ ವಾತಾವರಣ ಸೃಷ್ಟಿಸಬೇಕು. ಶಿರಸಿಯಲ್ಲಿ ಒಂದು ಚಿಲ್ಲಿಂಗ್ ಸೆಂಟರ್ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲು ಸಂಗ್ರಹ ಮಾರ್ಗಗಳನ್ನು ಹೆಚ್ಚಿಸಬೇಕು ಎಂದರು.
nವಿದ್ಯಾರ್ಥಿ ವೇತನ ಬಿಡುಗಡೆ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 28ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾಸಿರಿ ಯೋಜನೆಯಡಿ 7,026ವಿದ್ಯಾರ್ಥಿಗಳಿಗೆ 3.48ಕೋಟಿ ರೂ, ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ 5.62ಕೋಟಿ ರೂ, ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2.49 ಕೋಟಿ ರೂ. ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದೆ ಎಂದರು.
nಕಾಲೇಜು ಕಟ್ಟಡ ನಿರ್ಮಾಣ:
ಕಾರವಾರ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಕಾಮಗಾರಿಗೆ 10ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಕಾರವಾರ ಪಾಲಿಟೆಕ್ನಿಕ್ ಕಾಲೇಜು ರಿಪೇರಿಗೆ 4ಕೋಟಿ ರೂ. ಬಿಡುಗಡೆ ಮಾಡಲಾಗಿದ್ದರೂ, ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ, ಇದನ್ನು ಸಹ ತ್ವರಿತಗೊಳಿಸಬೇಕು ಎಂದರು. ಉದ್ದೇಶಿತ ಕಾರವಾರ ಮೆಡಿಕಲ್ ಕಾಲೇಜಿಗೆ ಜಿಲ್ಲಾಸ್ಪತ್ರೆಯನ್ನು ಹಸ್ತಾಂತರಿಸುವಂತೆ ಸರಕಾರದ ಆದೇಶವಿದ್ದರೂ, ಇದುವರೆಗೂ ಹಸ್ತಾಂತರಿಸಿರುವುದಿಲ್ಲ. ತಕ್ಷಣ ಆಸ್ಪತ್ರೆಯನ್ನು ಕಾಲೇಜಿಗೆ ಹಸ್ತಾಂತರಿಸಬೇಕು. ಯಾವುದೇ ಕಾರಣಕ್ಕೂ ಈ ವರ್ಷ ಮೆಡಿಕಲ್ ಕಾಲೇಜು ಆರಂಭಕ್ಕೆ ಎಲ್ಲರೂ ಸಹಕರಿಸುವಂತೆ ಅವರು ಹೇಳಿದರು.
ಶಾಸಕರಾದ ಸತೀಶ್ ಸೈಲ್, ಮಂಕಾಳ ವೈದ್ಯ, ಶಿವರಾಮ ಹೆಬ್ಬಾರ್, ಶಾರದಾ ಶೆಟ್ಟಿ, ಘೋಟ್ನೇಕರ್, ಪ್ರಭಾರ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್, ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಉಪಸ್ಥಿತರಿದ್ದರು.