ಕೋಮುವಾದದ ವಿರುದ್ಧ ಆಂದೋಲನ ಅಗತ್ಯ: ಪುಟ್ಟಣ್ಣಯ್ಯ

Update: 2016-04-06 17:57 GMT

ಬೆಂಗಳೂರು, ಎ. 6: ದೇಶದಲ್ಲಿ ಹಬ್ಬುತ್ತಿರುವ ಕೋಮುವಾದದ ಎಲ್ಲ ರೂಪಗಳ ವಿರುದ್ಧ ರೈತ ಹಾಗೂ ದಲಿತ ಪರ ಹೋರಾಟಗಾರರು ಮತ್ತು ಪ್ರಗತಿಪರ ಚಿಂತಕರು ದೊಡ್ಡ ಮಟ್ಟದ ಆಂದೋಲನವನ್ನು ರೂಪಿಸಬೇಕಿದೆ ಎಂದು ಪರ್ಯಾಯ ಚಿಂತನಾ ವೇದಿಕೆಯ ಸಂಚಾಲಕ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆ, ಕನ್ಹಯ್ಯೆ ಕುಮಾರ್ ಬಂಧನ ಹಿನ್ನೆಲೆಯಲ್ಲಿ ಪರ್ಯಾಯ ಚಿಂತನಾ ವೇದಿಕೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯವಾದ-ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಪತ್ತು’ ಕುರಿತ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಕೋಮುವಾದವು ದಿನೇ ದಿನೇ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ಈ ಪರಿಣಾಮ ವಿದ್ಯಾರ್ಥಿಗಳು, ದಲಿತರು, ಮುಸ್ಲಿಮರು, ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ಫ್ಯಾಶಿಸ್ಟ್ ಆಡಳಿತವನ್ನು ಜಾರಿಗೆ ತರಲು ಸಂಘ ಪರಿವಾರ ಪಣತೊಟ್ಟಿದೆ ಎಂದು ಕಿಡಿ ಕಾರಿದರು.
 ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳನ್ನು ಗಮನಿಸಿದರೆ ನ್ಯಾಯಾಂಗದ ಬಗ್ಗೆ ಜನರಲ್ಲಿ ಅಪನಂಬಿಕೆ ಶುರುವಾಗುವ ಭೀತಿಯಿದೆ. ತಮಿಳು ನಾಡಿನ ಜಯಲಲಿತಾ ಮತ್ತು ನಟ ಸಲ್ಮಾನ್‌ಖಾನ್ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳು ಜನರನ್ನು ಹೆಚ್ಚು ಗೊಂದಲಕ್ಕೆ ಒಳಪಡಿಸಿವೆ. ಹೀಗಾಗಿ ಈ ತೀರ್ಪುಗಳ ಕುರಿತು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಬೇಕು ಎಂದರು.
ಸಭೆಯಲ್ಲಿ ಪ್ರಗತಿಪರ ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಮಾತನಾಡಿ, ಸಂಘ ಪರಿವಾರಗಳು ಕೋಮುವಾದವನ್ನು ಬಿತ್ತಲು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿವೆ. ಈ ಪರಿಣಾಮ ಕೆಲವು ವಿದ್ಯಾರ್ಥಿಗಳು ಕೋಮುರೋಗಿಷ್ಠರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾನಿಲಯಗಳ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕೋಮುವಾದ ಮತ್ತು ಧರ್ಮಾಂಧತೆಯ ವಿರುದ್ಧ ಭಾಷಣ ಮಾಡಲು ಹೆದರಿಕೆಯಾಗುತ್ತದೆ. ಇದಕ್ಕೆ ಕಾರಣ ಕೋಮುರೋಗಿಷ್ಠ ವಿದ್ಯಾರ್ಥಿಗಳು ಪ್ರಗತಿಪರ ಭಾಷಣಗಾರರ ವಿರುದ್ಧ ಹಲ್ಲೆ ನಡೆಸುತ್ತಾರೆ ಎಂದಲ್ಲ, ಸಂಘಪರಿವಾರಗಳ ಕುತಂತ್ರಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ರೋಗಿಷ್ಠ ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು ಮೂಡಿಸಲು ಪ್ರಗತಿಪರ ಚಿಂತಕರು ಮುಂದಾಗಬೇಕೆಂದರು. ಚುನಾವಣೆಗಳನ್ನು ಜಾತಿ ಮತ್ತು ಹಣದಿಂದ ಮುಕ್ತಗೊಳಿಸಿದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದು ಹೇಳಿದ ಅವರು, ದೇಶದಲ್ಲಿ ಕೋಮುವಾದ ಸೃಷ್ಟಿಸುತ್ತಿರುವ ಸಂಘ ಪರಿವಾರಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.

ಸಿಪಿಐ ಮುಖಂಡರಾದ ಸಿದ್ದನಗೌಡ ಪಾಟೀಲ್ ಮಾತನಾಡಿ, ಜನ ಸಾಮಾನ್ಯರ ಸಮಸ್ಯೆಗಳ ಪರ ಕಾಳಜಿ ಮತ್ತು ಚಳವಳಿ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳು ಇಂದು ವಿಧಾನ ಸೌಧವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಮಾಡಬೇಕು. ಈ ಮೂಲಕ ರಾಜಕಾರಣದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದರು.
  ಪ್ರಗತಿಪರ ಚಿಂತಕ ಪ್ರೊ.ಜಿ.ಕೆ.ಗೋವಿಂದ ರಾವ್ ಮಾತನಾಡಿ, ಭಾರತ್ ಮಾತಾಕಿ ಜೈ ಎಂಬ ಘೋಷಣೆಯನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ದೇಶದಲ್ಲಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ. ಆ ಮೂಲಕ ಬಿಜೆಪಿ ಸರಕಾರವು ದೇಶದಲ್ಲಿನ ಇತರೆ ಸಮಸ್ಯೆಗಳತ್ತ ಜನ ಗಮನ ಹರಿಸದಿರುವಂತೆ ಮಾಡುತ್ತಿದೆ. ಈ ವಿವಾದದಲ್ಲಿ ಬಿಜೆಪಿ ಮತ್ತು ಸಂಘಪರಿವಾರಗಳು ಅನೈತಿಕ ಒಳಒಪ್ಪಂದ ಮಾಡಿಕೊಂಡಿವೆ ಎಂದು ದೂರಿದರು.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ, ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಘಟನೆಗಳು ದೇಶವಾಸಿಗಳನ್ನು ಕಂಗೆಡಿಸಿದೆ. ಅಲ್ಲದೆ ಈ ಘಟನೆಗಳ ವಿರುದ್ಧ ನರೇಂದ್ರ ಮೋದಿ ಇದುವರೆಗೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಅಲ್ಲದೆ ಮೋದಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಸೋತಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಅಭಿಪ್ರಾಯಪಟ್ಟರು.
ರೋಹಿತ್ ವೇಮುಲಾ, ಕನ್ಹಯ್ಯ ಕುಮಾರ್‌ರವರು ಮುಂದಿಟ್ಟಿರುವ ವಿಷಯಗಳ ಬಗ್ಗೆ ಜಿಲ್ಲೆ, ತಾಲೂಕು, ಕಾಲೇಜು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಚರ್ಚೆ, ಸಂವಾದ ನಡೆಸಬೇಕಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಹೇಳಿದರು. ಸಭೆಯಲ್ಲಿ ಹಲವು ನಿರ್ಣಯಗಳೊಂದಿಗೆ ಮುಂದಿನ ಹೋರಾಟಗಳ ರೂಪುರೇಷೆಯ ಕುರಿತು ಚರ್ಚಿಸಲಾಯಿತು.
ದುಂಡು ಮೇಜಿನ ಸಭೆಯಲ್ಲಿ ಶಾಸಕರಾದ ಬಿ.ಆರ್. ಪಾಟೀಲ್, ಪಿ. ರಾಜೀವ್, ಮಾಜಿ ಶಾಸಕ ಶ್ರೀರಾಮರೆಡ್ಡಿ, ಹಿರಿಯ ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಾಜಿ ಸಂಸದ ಕೋದಂಡರಾಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News