ರಸಾಯನಶಾಸ್ತ್ರ ಮರು ಪರೀಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ಬೆಂಗಳೂರು, ಎ.6: ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಎ.12ರಂದು ಮರುಪರೀಕ್ಷೆ ನಡೆಸಲು ನಿರ್ಧರಿಸಿರುವ ಪಿಯು ಮಂಡಳಿಯ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಚಂದ್ರಶೇಖರ್ ಎಂಬವರು ಅರ್ಜಿ ಸಲ್ಲಿಸಿ, ಮಂಡಳಿಯು ಈ ಮೊದಲೇ ತಿಳಿಸಿದಂತೆ ಮೊದಲ ಬಾರಿ ಬರೆದ ಪರೀಕ್ಷೆ ಫಲಿತಾಂಶದ ದಿನ ಹತ್ತಿರವಾಗಿದೆ. ಅಲ್ಲದೆ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಪಿಯು ಮಂಡಳಿಯೇ ನೇರ ಹೊಣೆಯಾಗಿದೆ. ಎರಡೆರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯು ಮಂಡಳಿಯ ವೈಫಲ್ಯದಿಂದ ಆಗಿದೆ. ರಾಜ್ಯಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆದಿದ್ದಾರೆ. ಪದೇ ಪದೇ ಪರೀಕ್ಷೆ ಎದುರಿಸುವುದರಿಂದ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗುತ್ತದೆ.
ಅಷ್ಟಕ್ಕೂ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಸೀಮಿತ ಪ್ರದೇಶದಲ್ಲಿ ಅಂತಹ ಕಾಲೇಜು ಮತ್ತು ಪ್ರದೇಶ ವ್ಯಾಪ್ತಿಯಲ್ಲಿ ಪುನರ್ ಪರೀಕ್ಷೆಗೆ ಕ್ರಮ ಜರಗಿಸಬಹುದೇ ಹೊರತು, ಇಡೀ ರಾಜ್ಯದಾದ್ಯಂತ ಪುನರ್ ಪರೀಕ್ಷೆ ನಡೆಸುವುದು ಸರಿಯಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಇದರಿಂದ ಅನ್ಯಾಯ ಆಗಲಿದೆ ಎಂಬುದು ಅರ್ಜಿದಾರರ ಸಮರ್ಥನೆಯಾಗಿದೆ.