ಎಸಿಬಿ ಹಿಂದೆಗೆಯಲು ಬಿಜೆಪಿ ಸಹಿಸಂಗ್ರಹ ಅಭಿಯಾನ
ಬೆಂಗಳೂರು, ಎ.6: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಮಾತಿಗೆ ಗೌರವ ಕೊಡುವುದಾದರೆ ಎಸಿಬಿ ಸಂಸ್ಥೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಎಸಿಬಿಯನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಆಯೋಜಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಎಸಿಬಿ ಭ್ರಷ್ಟಾಚಾರ ನಿಗ್ರಹದಳವಲ್ಲ, ಭ್ರಷ್ಟರ ರಕ್ಷಣಾ ದಳ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಮುಗಿಸಲು ಸಂಚು ನಡೆಸಿದೆ. ಅದರ ಭಾಗವಾಗಿ ಎಸಿಬಿ ಸಂಸ್ಥೆಯನ್ನು ರಚನೆ ಮಾಡಿದ್ದಾರೆ. ಎಸಿಬಿ ಕುರಿತು ಜನತೆಗೆ ವಿಶ್ವಾಸವಿಲ್ಲವಾಗಿದೆ. ಹೀಗಾಗಿ ಜನತೆಯ ಮಾತಿಗೆ ಸಿದ್ದರಾಮಯ್ಯ ಮನ್ನಣೆ ಕೊಡಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿ ಮಾಡಿದೆ. ರಾಜ್ಯ ಸರಕಾರದ ಈ ಕ್ರಮವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ವಕೀಲರ ಪ್ರತಿಭಟನೆ: ಎಸಿಬಿ ರಚನೆ ವಿರೋಧಿಸಿ ಬಿಜೆಪಿಯ ಕಾನೂನು ಘಟಕ ಹೈಕೋರ್ಟ್‌ನ ಮುಂಭಾಗದ ಪ್ರತಿಭಟನಾ ಧರಣಿ ನಡೆಸಿದರು. ಕಾಂಗ್ರೆಸ್ ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಲು ಎಸಿಬಿಯನ್ನು ರಚಿಸಿದೆ ಎಂದು ಆರೋಪಿಸಿದರು. ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ವಿನೋದ್ ಕುಮಾರ್, ಮುಖಂಡ ವಿವೇಕ್ ರೆಡ್ಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಪಾಲ ವಿ.ಆರ್.ವಾಲಾರವರನ್ನು ಭೇಟಿ ಮಾಡುವುದಕ್ಕೆ ಸಮಯ ನಿಗದಿ ಪಡಿಸಿಕೊಂಡಿರಲಿಲ್ಲ. ಹೀಗಾಗಿ ಸಂಪರ್ಕ ಕೊರತೆಯಿಂದ ರಾಜ್ಯಪಾಲರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದನ್ನೇ ನೆಪವಾಗಿಸಿಕೊಂಡು ರಾಜ್ಯಪಾಲರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ