ಭಾರತ ಮಾತೆ ಒಪ್ಪದವನು ಭಾರತೀಯನೇ ಅಲ್ಲ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಮಾ. 6: ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗದವರು ದೇಶ ಬಿಟ್ಟು ಹೋಗಲಿ ಎಂಬ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿಕೆಯ ಬಗ್ಗೆ ದೇಶದಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
‘ಭಾರತ್ ಮಾತಾ ಕೀ ಜೈ ಎನ್ನದವರು ದೇಶ ಬಿಟ್ಟು ಹೋಗಬೇಕೆಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಸರಿಯಾಗಿದೆ. ದೇಶವಾಸಿಗಳೆಲ್ಲರೂ ಈ ಘೋಷಣೆಯನ್ನು ಸ್ವಯಂಪ್ರೇರಿತವಾಗಿ ಹೇಳಬೇಕು. ಘೋಷಣೆ ಕೂಗಬೇಕೆ? ಬೇಡವೇ? ಎಂಬ ಚರ್ಚೆ ಹಾಗೂ ಟೀಕೆ ಅನಗತ್ಯವಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ರದ್ದುಪಡಿಸಬೇಕೆಂದು ಆಗ್ರಹಿಸಿ ಬುಧವಾರ ನಗರದ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ ಮಹಿಳಾ ಘಟಕ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯ ಬಗ್ಗೆ ಚರ್ಚೆಯಾಗುತ್ತಿರುವುದೇ ತಪ್ಪಾಗಿದ್ದು, ಅಪ್ರಸ್ತುತವಾಗಿದೆ. ಯಾರೂ ನಮ್ಮ ತಾಯಿ ಭಾರತ ಮಾತೆ ಎಂದು ಒಪ್ಪಿಕೊಳ್ಳುವುದಿಲ್ಲವೋ ಆತ ಭಾರತೀಯನೇ ಅಲ್ಲ. ‘ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ದೇಶವಾಸಿಗಳೆಲ್ಲರೂ ಸ್ವಯಂಪ್ರೇರಿತವಾಗಿ ಹೇಳಬೇಕು ಎಂದು ತಿಳಿಸಿದ್ದಾರೆ.
ರಕ್ಷಣೆ: ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ರಾಜ್ಯ ಸರಕಾರವು ಸದನದಲ್ಲಿ ಮಂಡಿಸದೆ ರದ್ದುಗೊಳಿಸಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದಾಗಿದೆ. ಈ ಮೂಲಕ ಭ್ರಷ್ಟಾಚಾರಿಗಳ ರಕ್ಷಣೆಗೆ ಮುಂದಾಗಿದೆ ಇದೇ ಸಂದರ್ಭದಲ್ಲಿ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.