×
Ad

ಜಿಲ್ಲಾಧಿಕಾರಿ ಕಚೇರಿಗಳಲ್ಲಿ ದೂರು ಪ್ರಾಧಿಕಾರ ರಚನೆ

Update: 2016-04-06 23:31 IST

ಬೆಂಗಳೂರು, ಎ.6: ಜಿಲ್ಲಾ ಹಂತದ ಪೊಲೀಸ್ ದೂರು ಪ್ರಾಧಿಕಾರದ ಕಚೇರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ರಾಜ್ಯ ಸರಕಾರವು ಹೈಕೋರ್ಟ್‌ನ ನ್ಯಾಯಪೀಠಕ್ಕೆ ತಿಳಿಸಿದೆ.
  ಪೊಲೀಸ್ ದೂರು ಪ್ರಾಧಿಕಾರ ಅನುಷ್ಠಾನ ಕುರಿತಂತೆ ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠದ ಎದುರು ವಾದ ಮಂಡಿಸಿದ ಸರಕಾರಿ ಪರ ವಕೀಲರು, ನ್ಯಾಯಪೀಠದ ನಿರ್ದೇಶನದಂತೆಯೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ಪ್ರಾಧಿಕಾರದ ಕಚೇರಿ ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
   ಈ ಹಿಂದೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು, ದೂರು ಪ್ರಾಧಿಕಾರದ ಕಚೇರಿಯನ್ನು ಎಲ್ಲೆಂದರಲ್ಲಿ ಸ್ಥಾಪಿಸಿದರೆ ಪ್ರಯೋಜನ ಆಗದು. ಅಲ್ಲದೆ, ಜನರು ಪೊಲೀಸರ ವಿರುದ್ಧ ದೂರು ನೀಡಲು ಧೈರ್ಯ ಮಾಡುವುದಿಲ್ಲ. ಹೀಗಾಗಿ ಪ್ರತ್ಯೇಕ ಕಚೇರಿ ಆರಂಭಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲೇ ದೂರು ಕೇಂದ್ರ ಆರಂಭಿಸುವುದರಿಂದ ಜನರು ನಿರ್ಭೀತರಾಗಿ ದೂರು ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
  ದೂರು ಪ್ರಾಧಿಕಾರದ ಕಚೇರಿಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ಅಲ್ಲದೆ ಕಾರ್ಯನಿರ್ವಹಣೆಯ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ದಿಸೆಯಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳದಲ್ಲಿ ಪ್ರದರ್ಶನ ಫಲಕ ಹಾಕುವ ಮೂಲಕ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News