×
Ad

ಎ.9ರಂದು ‘ಇತ್ತೇಹಾದ್- ಎ-ಉಮ್ಮತ್’ ಸಮಾವೇಶ

Update: 2016-04-06 23:36 IST

ಬೆಂಗಳೂರು, ಎ.6: ಮಿನ್‌ಹಾಜುಲ್ ಕುರ್‌ಆನ್ ಸಂಸ್ಥೆ ವತಿಯಿಂದ ಎ.9ರಂದು ನಗರದ ದಾರುಸ್ಸಲಾಮ್ ಸಭಾಂಗಣದಲ್ಲಿ ‘ಇತ್ತೇಹಾದ್-ಎ-ಉಮ್ಮತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಾವೇಶದ ಸಂಚಾಲಕ ಫೈಝುಲ್ಲಾ ಬೇಗ್ ಜುನೈದಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಹೆಚ್ಚುತ್ತಿರುವ ಆತಂಕವಾದ, ದ್ವೇಷ, ಅಸೂಯೆಯ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಲು ಮುಸ್ಲಿಮ್ ಸಮುದಾಯದಲ್ಲಿರುವ ಎಲ್ಲ ಪಂಗಡಗಳ ನಡುವೆ ಒಗ್ಗಟ್ಟಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ‘ಇತ್ತೇಹಾದ್-ಎ-ಉಮ್ಮತ್’ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಬಡತನ, ಅನಕ್ಷರತೆ ನಮ್ಮ ದೇಶ ಹಾಗೂ ಸಮುದಾಯದ ದೊಡ್ಡ ಶತ್ರುವಾಗಿದೆ. ಸೂಫಿಗಳ ಚಿಂತನೆಗಳನ್ನು ಮುಂದಿಟ್ಟುಕೊಂಡು ದರ್ಗಾ, ಮಸೀದಿಗಳ ಮೂಲಕ ಸಮಾಜದಲ್ಲಿ ಯಾವ ರೀತಿ ಜಾಗೃತಿಯನ್ನು ಮೂಡಿಸಬಹುದು ಎಂಬುದರ ಕುರಿತು ಈ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಫೈಝುಲ್ಲಾ ಬೇಗ್ ಜುನೈದಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಿನ್‌ಹಾಜುಲ್ ಕುರ್‌ಆನ್ ಸಂಸ್ಥೆಯ ರಾಜ್ಯಾಧ್ಯಕ್ಷ ನಜ್ಮುದ್ದೀನ್ ಹಯಾತ್ ಶರೀಫ್, ಬೆಂಗಳೂರು ವಿಭಾಗದ ಮುಖ್ಯಸ್ಥ ಅಯ್ಯೂಬ್ ಅನ್ಸಾರಿ, ವೌಲಾನ ಝುಲ್ಫೀಖಾರ್ ರಝ್ವಿ, ಸೂಫಿ ಫುರ್ಖಾನ್ ಹುಸೇನ್, ಮುಯಿನುದ್ದೀನ್‌ಖಾನ್ ಜುನೈದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News