ಪಿಯು ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಒಮ್ಮತದ ಸೂತ್ರ ಅನುಸರಿಸಲು ಮುಖ್ಯಮಂತ್ರಿಗೆ ಎಂಎಲ್‌ಸಿಗಳ ಸಲಹೆ
ಬೆಂಗಳೂರು, ಎ.7: ಮೌಲ್ಯಮಾಪನ ಬಹಿಷ್ಕರಿಸಿರುವ ಪಿಯು ಉಪನ್ಯಾಸಕರ ಜತೆ ಸರಕಾರ ಈ ವರೆಗೆ ನಡೆಸಿದ ಎಲ್ಲ ಸಭೆಗಳು ವಿಫಲವಾಗಿದೆ. ಆ ಹಿನ್ನೆಲೆಯಲ್ಲಿ ಒಮ್ಮತದ ಸೂತ್ರ ಅನುಸರಿಸಲು ಮುಖ್ಯ ಮಂತ್ರಿಗೆ ಎಂಎಲ್‌ಸಿಗಳು ಸಲಹೆ ನೀಡಿದ್ದಾರೆ ಎಂದು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದ್ದಾರೆ.
ಎಪ್ರಿಲ್ 13ರ ಒಳಗಾಗಿ ಎಲ್ಲ ಸಮಸ್ಯೆಗಳು ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೌಲ್ಯಮಾಪನ ಬಹಿಷ್ಕರಿಸಿರುವ ಪಿಯು ಉಪನ್ಯಾಸಕರ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ ನಡೆಸಿದ ಸರಕಾರದ ಮಾತುಕತೆ ಫಲಪ್ರದವಾಗಿಲ್ಲ. ಬಳಿಕ ಎಂಎಲ್‌ಸಿಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸ ’ಕಾವೇರ”ಯಲ್ಲಿ ಭೇಟಿಯಾಗಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಮುಖ್ಯ ಮಂತ್ರಿಗೆ ವಿಧಾನ ಪರಿಷತ್ ಸದಸ್ಯರು ಮನವರಿಕೆ ಮಾಡಿದರು.
ಬೇಡಿಕೆಗಳ ಬಗ್ಗೆ ಉಪನ್ಯಾಸಕರೊಂದಿಗೆ ಚರ್ಚಿಸುವ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಉಪನ್ಯಾಸಕರ ಬೇಡಿಕೆಗಳಿಗೆ ಅವರು ಸಕರಾತ್ಮಕವಾಗಿ ಸ್ಪಂದಿಸುವ ಆಶಾವಾದ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.