ಶಿವಮೊಗ್ಗ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಮನವಿ
ಶಿವಮೊಗ್ಗ, ಎ. 7: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ನಡೆಯುತ್ತಿರುವ ದಾಳಿ-ದೌರ್ಜನ್ಯ ಹೆಚ್ಚಾಗುತ್ತಿದೆ. ಈ ಸಮುದಾಯಗಳು ಆತಂಕದಲ್ಲಿ ಬದುಕುವಂತಾಗಿದ್ದು ಈ ಸಂಬಂಧ ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಗುರುವಾರ ನಗರದ ಡಿಸಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಅರ್ಪಿಸಿತು. ಅಲ್ಪಸಂಖ್ಯಾತರನ್ನು ದೇಶ ದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಸುಳ್ಳು ಆರೋಪ ಹೊರಿಸಿ ದೌರ್ಜನ್ಯ ನಡೆಸಲಾಗುತ್ತಿದೆ. ದಲಿತರ ಮೇಲೆಯೂ ದೌರ್ಜನ್ಯ ಹೆಚ್ಚಾಗುತ್ತಿದೆ. ಉತ್ತರ ಪ್ರದೇಶ ರಾಜ್ಯದ ದಾದ್ರಿಯಲ್ಲಿ ಗೋಮಾಂಸ ಸೇವನೆ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಸಂಘಪರಿವಾರದ ಕಿಡಿಗೇಡಿಗಳು ಹತ್ಯೆಗೈದಿದ್ದರು. ತನಿಖೆಯ ವೇಳೆ ಕುರಿ ಮಾಂಸ ಎಂಬುವುದು ತಿಳಿದುಬಂದಿತ್ತು. ಇಲ್ಲಿಯವರೆಗೂ ಹಂತಕರ ವಿರುದ್ಧ ಯಾವುದೇ ಕ್ರಮ ಜರಗಿಸಿಲ್ಲ ಎಂದು ಸಂಘಟನೆ ಆರೋಪಿಸಿದೆ. ಹೈದಾರಾಬಾದ್ ಹಾಗೂ ಜೆಎನ್‌ಯು ವಿಶ್ವ ವಿದ್ಯಾನಿಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಶೋಷಣೆ ಖಂಡನೀಯವಾದುದಾಗಿದೆ. ಅಲ್ಪಸಂಖ್ಯಾತ ಹಾಗೂ ದಲಿತರು ನಿರಂತರವಾಗಿ ಹಲ್ಲೆ-ದೌರ್ಜನ್ಯಕ್ಕೀಡಾಗುತ್ತಿರುವುದು ಕೇಂದ್ರ ಸರಕಾರದ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಸಂಘಟನೆಆರೋಪಿಸಿದೆ. ಮನವಿ ಅರ್ಪಿಸುವ ಸಂದರ್ಭದಲ್ಲಿ ಘಟಕದ ನಗರಾಧ್ಯಕ್ಷ ಮುಹಮ್ಮದ್ ನಿಹಾಲ್, ಉಪಾಧ್ಯಕ್ಷ ಮುಹಮ್ಮದ್ ಆರೀಫುಲ್ಲಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಕೀಂ, ಪಾಲಿಕೆ ಸದಸ್ಯರಾದ ಆಸಿಫ್, ಮುಖಂಡರಾದ ಫರ್ವೀಝ್ ಅಹ್ಮದ್ ಉಪಸ್ಥಿತರಿದ್ದರು.