ಪದವೀಧರರು ನೇರವಾಗಿ ಉದ್ಯೋಗಕ್ಕೆ ಅರ್ಹರಲ್ಲ: ಡಿಸಿ ಅನೀಸ್
ಕುಶಾಲನಗರ, ಎ.7: ಇಲ್ಲಿನ ಸಮೀಪದ ಮಾದಾಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದ ವತಿಯಿಂದ ಆಯೋಜಿಸಲಾಗಿದ್ದ ‘ಹಾಸ್ಟೆಲ್‌ಮೇನಿಯಾ-2016’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮ್ಮದ್ ಇಂಜಿನಿಯರಿಂಗ್ ಮುಗಿಸಿ ಕಾಲೇಜುಗಳಿಂದ ಹೊರಬರುವ ಶೇ. 80ರಷ್ಟು ಪದವೀಧರರು ನೇರವಾಗಿ ಉದ್ಯೋಗಕ್ಕೆ ಅರ್ಹರಲ್ಲ ಎನ್ನುವ ಸರ್ವೇ ವರದಿಗಳು ಕಳವಳ ಹುಟ್ಟಿಸುವಂತಹದ್ದು ಎಂದು ಹೇಳಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಸರಕಾರ ಸಾಕಷ್ಟು ಖರ್ಚು ಮಾಡುತ್ತದೆ. ಇದು ಸಮಾಜದ ಋಣ. ಹಾಗಾಗಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು. ಮನುಷ್ಯನ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಹಾಸ್ಟೆಲ್‌ವಾಸ ಹಲವು ಪಾಠಗಳನ್ನು ಕಲಿಸುತ್ತದೆ. ಸ್ವತಂತ್ರ ಬದುಕು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೇಳಿಕೊಡುತ್ತದೆ. ಕೆಟ್ಟ ಹವ್ಯಾಸಗಳೂ ಸೆಳೆಯುವ ಸಾಧ್ಯತೆ ಇದ್ದು, ಜೀವನ ಗುರಿಯ ಮುಂದೆ ಅವುಗಳನ್ನೆಲ್ಲಾ ನಿರ್ಲಕ್ಷಿಸಬೇಕಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಲಯ ಪಾಲಕ ಪಿ. ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾಪಂ ಸದಸ್ಯೆ ಪುಷ್ಪಾಜನಾರ್ದನ್, ಜಿಪಂ ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್, ತಾಪಂ ಮಾಜಿ ಸದಸ್ಯ ಸತೀಶ್ ಕುಂದರ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನ್ನಾಥ್, ಇಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ದೇವಮ್ಮ, ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್‌ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳೇ ರಚಿಸಿದ ರಾಷ್ಟ್ರನಾಯಕರ ಭಾವಚಿತ್ರ ಮತ್ತು ಹಾಸ್ಟೆಲ್ ಲೋಗೋವನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ರಸ್ತೆಗೆ ಡಾಂಬರು ಹಾಕಲು ಬರುವ ಇಂಜಿನಿಯರ್‌ಗೆ ಡಾಂಬರ್‌ನ್ನು ಎಷ್ಟು ಪ್ರಮಾಣದಲ್ಲಿ ಬಿಸಿ ಮಾಡಬೇಕು ಎನ್ನುವ ಪ್ರಾಥಮಿಕ ಜ್ಞಾನವೇ ಇರುವುದಿಲ್ಲ. ಇದಕ್ಕೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ. ಉದ್ಯೋಗದಾತರು ನಿರೀಕ್ಷಿಸುವ ಕೌಶಲ್ಯ ಇರುವ ತಾಂತ್ರಿಕ ವಿದ್ಯಾಭ್ಯಾಸ ಕಾಲೇಜುಗಳಲ್ಲಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಂದು ಸಮಸ್ಯೆಯನ್ನು ಹಲವಾರು ದೃಷ್ಟಿಕೋನಗಳಲ್ಲಿ ನೋಡಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
- ಜಗನ್ನಾಥ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ.