×
Ad

ರಸ್ತೆ ಅವ್ಯವಸ್ಥೆಗೆ ಅಮಾಯಕ ಯುವಕ ಬಲಿ ಅವೈಜ್ಞಾನಿಕ ರಸ್ತೆ: ಹೆಚ್ಚುತ್ತಿರುವ ಅಪಘಾತಗಳು

Update: 2016-04-07 22:16 IST

ಶಿವಮೊಗ್ಗ, ಎ.7: ಜಲ್ಲಿಕಲ್ಲು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ರಸ್ತೆ ತಿರುವಿನಲ್ಲಿ ವೇಗವಾಗಿ ಬಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಚಾಲಕ ಮೃತಪಟ್ಟ ಘಟನೆ ನಗರದ ಹೊರವಲಯ ಸೋಮಿನಕೊಪ್ಪದ ಶಿವಮೊಗ್ಗ -ರಾಮನಗರ ಜಿಲ್ಲಾ ಹೆದ್ದಾರಿಯಲ್ಲಿ ವರದಿಯಾಗಿದೆ. ಗೆಜ್ಜೇನಹಳ್ಳಿ ಗ್ರಾಮದ ನಿವಾಸಿ ಹರೀಶ್ (25) ಮೃತಪಟ್ಟ ಬೈಕ್ ಸವಾರ ಎಂದುಗುರುತಿಸಲಾಗಿದೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆ ಚಾಲನೆಯೇ ಅವಘಡಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅವೈಜ್ಞಾನಿಕ ರಸ್ತೆ:

ಸೋಮಿನಕೊಪ್ಪದಿಂದ ಪ್ರೆಸ್ ಕಾಲನಿ ನಡುವಿನ ರಸ್ತೆಯು ಅತ್ಯಂತ ಕಿರಿದಾಗಿದೆ. ಹಾಗೆಯೇ ಸೇತುವೆ ಕೂಡ ಅಪಾಯಕಾರಿ ಸ್ಥಿತಿಯಲ್ಲಿದ್ದು, ತಡೆಗೋಡೆಗಳು ಹಾಳಾಗಿವೆ. ಕಳೆದ ಕೆಲ ತಿಂಗಳುಗಳ ಹಿಂದಷ್ಟೆ ಈ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಿವಮೊಗ್ಗ ನಗರದ ಕಾಲೇಜ್‌ವೊಂದರ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ. ಈ ರಸ್ತೆಯಲ್ಲಿ ಜಲ್ಲಿ ಸಾಗಣೆ ಮಾಡುವ ಲಾರಿ ಹಾಗೂ ಟ್ರ್ಯಾಕ್ಟರ್‌ಗಳ ಸಂಚಾರ ದಟ್ಟಣೆ ಹೆಚ್ಚಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಭಾರೀ ಸರಕು-ಸಾಗಣೆ ವಾಹನಗಳು ಕಿರಿದಾದ ರಸ್ತೆಯಲ್ಲಿಯೇ ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು, ದ್ವಿ ಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಸಂಚರಿಸುವಂತಹ ಸ್ಥಿತಿಯಿದೆ.

ತಿರುವುಗಳನ್ನು ತೆರವುಗೊಳಿಸುವುದರ ಜೊತೆಗೆ ವಾಹನ ಸಂಚಾರ ದಟ್ಟಣೆಗೆ ಅನುಗುಣವಾಗಿ ರಸ್ತೆ ಅಗಲೀಕರಣ ಮಾಡಬೇಕು. ದುಃಸ್ಥಿತಿಯಲ್ಲಿರುವ ಸೇತುವೆಯ ಬಳಿ ಹೊಸ ಸೇತುವೆ ನಿರ್ಮಾಣ ಮಾಡಬೇಕು. ವಾಹನಗಳ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಹಂಪ್ ಹಾಕಬೇಕು. ಸೂಚನಾ ಫಲಕ, ರಿಫ್ಲೆಕ್ಟರ್ ಅಳವಡಿಸಬೇಕು. ಈಗಾಗಲೇ ಈ ಕುರಿತಂತೆ ಪಿಡಬ್ಲ್ಯುಡಿ ಇಲಾಖೆಯ ವಿಶೇಷ ವಿಭಾಗದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಇನ್ನಾದರೂ ಪಿಡಬ್ಲ್ಯುಡಿ ವಿಶೇಷ ವಿಭಾಗದ ಅಧಿಕಾರಿಗಳು ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು. ನಾಗರಿಕರಿಗೆ ನೆರವಾಗುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಲಾಖೆಯ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News