ಭ್ರಷ್ಟಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಸಾಗರ,ಎ.7: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿ ನಡೆಸಿರುವ ಅವ್ಯವಹಾರದ ತನಿಖೆ ನಡೆಸಬೇಕು ಹಾಗೂ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆರಗ ಜ್ಞಾನೇಂದ್ರ ಅವರು ನಡೆಸಿರುವ ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾ ಸಹಕಾರಿ ರೈತರ ಹೋರಾಟ ವೇದಿಕೆ ವತಿಯಿಂದ ವಿಧಾನಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿ ಸೂಡಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ನಿವೇಶನ ವಿಲೇವಾರಿ ಮಾಡಲಾಗಿದೆ. ಸ್ವಜನ ಪಕ್ಷಪಾತದ ಜೊತೆಗೆ ನ್ಯಾಯಬದ್ಧ್ದ ಅರ್ಜಿದಾರರಿಗೆ ನಿವೇಶನ ನೀಡಿಲ್ಲ. ಈ ಅವ್ಯವಹಾರ ಕುರಿತು ಜಿಲ್ಲಾಧಿಕಾರಿಗಳ ಆದೇಶದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶರು ತನಿಖೆ ನಡೆಸಿ, ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಜ್ಞಾನೇಶ್ವರ್ ಮತ್ತು ಎಸ್.ದತ್ತಾತ್ರಿ, ಅಂದಿನ ಆಯುಕ್ತರಾಗಿದ್ದ ಸದಾಶಿವಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಆರಗ ಜ್ಞಾನೇಂದ್ರ ಭದ್ರಾವತಿ ಎಂಪಿಎಂ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಆರಗ ಜ್ಞಾನೇಂದ್ರ ಅಧ್ಯಕ್ಷರಾಗುವ ಮೊದಲು 32 ಕೋಟಿ ರೂ. ನಷ್ಟ ಇದ್ದದ್ದು, ಅವರು ಅಧಿಕಾರದಿಂದ ಇಳಿಯುವಾಗ ಸುಮಾರು 300 ಕೋಟಿ ರೂ. ನಷ್ಟ ಉಂಟಾಗಿತ್ತು. ಮೇಲಿನ ಈ ಎರಡೂ ಪ್ರಕರಣವನ್ನು ಎಸಿಬಿಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಸಹಕಾರಿ ರೈತ ಒಕ್ಕೂಟದ ಅಧ್ಯಕ್ಷ ಬಿ.ಆರ್.ಜಯಂತ್, ಕಾರ್ಯದರ್ಶಿ ಸುರೇಶ ವಾಟಗೋಡು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ, ಹರತಾಳು ನಾಗರಾಜ್,ಶ್ರೀಪಾದ ಹೆಗಡೆ ನಿಸ್ರಾಣಿ, ಬಂಡಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.