ನೀರಿನ ಸಮಸ್ಯೆಗೆ ಗ್ರಾಪಂಗಳು ತುರ್ತು ಕ್ರಮ ಕೈಗೊಳ್ಳಲಿ: ರಾಜಗೋಪಾಲ್
ಮೂಡಿಗೆರೆ, ಎ.7: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆ ಯಾವುದೇ ಭಾಗದಲ್ಲಿ ಕಾಣಿಸಿದರೂ ತಕ್ಷಣ ಗ್ರಾಪಂ ಗಳು ತುರ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಪಂ ಪಿಡಿಓಗಳಿಗೆ ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್ ಸೂಚಿಸಿದರು.
ಅವರು ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಸಂಬಂಧ ಗ್ರಾಪಂ ಪಿಡಿಓಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಾರದು. ಸಮಸ್ಯೆ ಕಂಡು ಬಂದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಅಗತ್ಯಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕು ಎಂದು ಸೂಚನೆ ನೀಡಿದರು.
ತಾಲೂಕಿನ ಹೇಮಾವತಿ, ಜಪಾವತಿ, ಸುಂಡೇಕೆರೆ, ಸುಣ್ಣದಹಳ್ಳಗಳು ನೀರಿಲ್ಲದೆ ಬರಿದಾಗಿದೆ. ಅಂತರ್ಜಲ ಕುಸಿತ ಕಾಣುತ್ತಿದೆ. ವಾಡಿಕೆಯಂತೆ ಬರಬೇಕಿದ್ದ ಮಳೆಯೂ ಈ ಬಾರಿ ಬರದಿರುವುದರಿಂದ ಸಹಜವಾಗಿಯೇ ಎಲ್ಲೆಡೆಯೂ ಕುಡಿಯುವ ನೀರಿನ ಸಮಸ್ಯೆ ಬುಗಿಲೇಳುವ ಸಾಧ್ಯತೆಗಳಿವೆ. ಸಮಸ್ಯೆ ಪರಿಹರಿಸಲು ಗ್ರಾಪಂ ಪಿಡಿಓಗಳು ಬದ್ಧರಾಗಬೇಕು ಎಂದು ತಾಕೀತು ಮಾಡಿದರು.
ಕುಡಿಯುವ ನೀರಿನ ಹಾಗೂ ಇತರೆ ತೊಂದರೆಗಳಿದ್ದರೆ ಶುಲ್ಕ ರಹಿತ ಸಹಾಯವಾಣಿ ಸಂಖ್ಯೆ 1800 4250688 ಗೆ ತುರ್ತು ಕರೆ ಮಾಡಬಹುದು, ಈ ಸಹಾಯವಾಣಿ ಸಂಖ್ಯೆಯನ್ನು ಸಾಮಾನ್ಯ ಜನರಿಗೆ ಕಾಣುವಂತೆ ಎಲ್ಲ ಗ್ರಾಪಂ ಕಚೇರಿ ಎದುರು ಫಲಕದಲ್ಲಿ ಪ್ರಕಟಿಸಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸದ ಫಲಾನುಭವಿಗಳ ಹಾಗೂ ಶೌಚಾಲಯ ನಿರ್ಮಿಸಿದವರ ಹೆಸರಿನ ಪಟ್ಟಿಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕುವಂತೆ ತಿಳಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ರುದ್ರಪ್ಪ, ತಹಶೀಲ್ದಾರ್ ಪದ್ಮನಾಭಶಾಸ್ತ್ರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.