×
Ad

ಅರಣ್ಯವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ವಿಳಂಬ ನೀತಿ

Update: 2016-04-09 22:02 IST

-ಶ್ರೀನಿವಾಸ ಬಾಡಕರ

ಕಾರವಾರ, ಎ.9: ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ವಿಳಂಬವಾಗುತ್ತಿರುವುದರಿಂದ ಸಾವಿರಾರು ಫಲಾನುಭವಿಗಳು ಹಕ್ಕು ಪತ್ರಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಅರಣ್ಯ ಹಕ್ಕು ಕಾಯ್ದೆ 2012ರ ತಿದ್ದುಪಡಿಯ ಪ್ರಕಾರ ಅತಿಕ್ರಮಣ ಮಾಡಿಕೊಂಡ ಜಿಲ್ಲೆಯ ಪಾರಂಪರಿಕ ಅರಣ್ಯವಾಸಿಗಳು, ಪರಿಶಿಷ್ಟ ಬುಡಕಟ್ಟಿನ ಸಮುದಾಯ, ಇತರೆ ಫಲಾನುಭವಿಗಳು ತಮ್ಮ ಭೂಮಿಯನ್ನು ಸಕ್ರಮಗೊಳಿಸಿ, ಹಕ್ಕು ಪತ್ರ ನೀಡುವಂತೆ ಒಟ್ಟು 93,338 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಮನೆ ಹಕ್ಕಿಗೆ ಸಂಬಂಧಿಸಿದಂತೆ 24,462, ಜಮೀನು ಹಕ್ಕಿಗೆ ಸಂಬಂಧಿಸಿದ 66,317 ಹಾಗೂ ಸಮುದಾಯದ 2,559 ಅರ್ಜಿಗಳಿವೆ. ಆ ಪೈಕಿ ಈವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 39,221 ಅರ್ಜಿಗಳನ್ನು ಮಾತ್ರ ಪರಿಶೀಲನೆ ಮಾಡಲಾಗಿದ್ದು 43,984 ಅರ್ಜಿಗಳು ಬಾಕಿ ಉಳಿದಿವೆ.

ಕಾಯ್ದೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿರುವ ಅರಣ್ಯ, ಸಮಾಜ ಕಲ್ಯಾಣ ಹಾಗೂ ಕಂದಾಯ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಇಷ್ಟೊಂದು ಅರ್ಜಿಗಳು ಬಾಕಿ ಉಳಿಯಲು ಕಾರಣವಾಗಿದೆ. ಕಾಯ್ದೆಯ ಪ್ರಕಾರ ಗ್ರಾಮ, ಉಪ ವಿಭಾಗ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕುಗಳ ಸಮಿತಿಗಳ ಪರಿಶೀಲನೆ ಬಳಿಕ ಮಾನ್ಯತೆ ಪಡೆದ ಫಲಾನುಭವಿಗಳಿಗೆ ಉಪಭೋಗದ ಪಟ್ಟಾ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1,153 ಅರಣ್ಯ ಹಕ್ಕು ಗ್ರಾಮ ಸಮಿತಿ, ನಗರ, ಪಟ್ಟಣ ಪ್ರದೇಶಗಳಲ್ಲಿ 213 ವಾರ್ಡ್ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮ, ವಾರ್ಡ್ ಸಮಿತಿ ಸದಸ್ಯರಿಗೆ ತಿಳುವಳಿಕೆ, ಸೌಲಭ್ಯ ಒದಗಿಸದಿರುವುದೂ ಕಾಯ್ದೆ ಅನುಷ್ಠಾನಕ್ಕೆ ತೊಡಕಾಗಿದೆ. ಅರಣ್ಯ ವಾಸಿಗಳು ಸಲ್ಲಿಸಿದ ವೈಯಕ್ತಿಕ, ಸಾಮುದಾಯಿಕ ಅರ್ಜಿ ಸ್ವೀಕರಿಸಿ, ಪಟ್ಟಿ ತಯಾರಿಸಿ ಕ್ಷೇತ್ರ ಭೇಟಿ ನೀಡಿ ಪರಿಶೀಲಿಸುವ ಜವಾಬ್ದಾರಿ ಹೊಂದಿರುವ ಗ್ರಾಮ ಸಮಿತಿಗಳಿಗೆ ಸಮರ್ಪಕ ಸೌಲಭ್ಯಗಳಿಲ್ಲ. ಸಮಿತಿ ಸದಸ್ಯರಿಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಿಲ್ಲ. ಪ್ರಮುಖ ಇಲಾಖೆಗಳು ಸಮನ್ವಯದಿಂದ ತಮ್ಮ ಜವಬ್ದಾರಿ ನಿರ್ವಹಿಸದ ಕಾರಣ ಪಟ್ಟಾದ ಅಧಿಕಾರ ನೀಡುವ ಜಿಲ್ಲಾ ಮಟ್ಟದ ಸಮಿತಿಗೆ ಅರ್ಜಿಗಳು ಬರುವುದರಲ್ಲಿ ವಿಳಂಬವಾಗುತ್ತಿದೆ. ಸದ್ಯದ ಅಂಕಿ-ಅಂಶದ ಪ್ರಕಾರ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿಯೇ 593 ಅರ್ಜಿಗಳು ಪರಿಶೀಲನೆಯಾಗದೆ ಬಾಕಿ ಉಳಿದಿವೆ. ಜಿಲ್ಲೆಗೆ ಸಂಬಂಧಿಸಿದಂತೆ ಹಲವಾರು ದಶಕಗಳ ಸಮಸ್ಯೆ ಇದಾಗಿದ್ದು ಜನರು ತಮ್ಮ ಹಕ್ಕು ಪತ್ರಗಳಿಗಾಗಿ ಸಾಕಷ್ಟು ಬಾರಿ ಸರಕಾರಿ ಕಚೇರಿಗಳಿಗೆ ತೆರಳಿ ಬಾಗಿಲು ತಟ್ಟಿದ್ದಾರೆ. ಅದೆಷ್ಟೇ ಸಲ ಸರಕಾರದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಸರಕಾರವು ಸಹಾ ಬೆರಳೆಣಿಕೆಯಷ್ಟು ಜನರಿಗೆ ಪಟ್ಟಾ ನೀಡಿದೆ. ಇದರಿಂದ ಜನರು ಬೇಸತ್ತಿದ್ದಾರೆ. ಸರಕಾರ ಈ ಬಗ್ಗೆ ಗಮನ ಹರಿಸಿ, ಜನರ ಬವಣೆಯನ್ನು ತಪ್ಪಿಸಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News