×
Ad

ಕುಡಿಯುವ ನೀರಿಗೆ ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಿ: ಶಾಸಕ ಅಪ್ಪಚ್ಚು

Update: 2016-04-09 22:05 IST

ಮಡಿಕೇರಿ, ಎ.9: ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದ್ದು, ಇದನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕೆಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ನೂತನ ಕೊಳವೆ ಬಾವಿಗಳ ಮೂಲಕ ನೀರನ್ನು ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಹಣವಿದೆ ಎಂದು ಹೇಳಿದ್ದು, ಹಳೆಯ ಕೊಳವೆ ಬಾವಿಗಳನ್ನು ದುರಸ್ತಿಪಡಿಸುವಂತೆ ಸಲಹೆ ನೀಡಿದ್ದಾರೆ. ಆದರೆ ದುರಸ್ತಿ ಕಾರ್ಯದಿಂದ ನೀರುಸಿಗುವುದು ಅಸಾಧ್ಯವಾಗಿದ್ದು, ಹೊಸ ಕೊಳವೆ ಬಾವಿಯನ್ನು ಕೊರೆಸುವ ಅಗತ್ಯವಿದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ವಹಿಸಲು ಕೇಂದ್ರ ಸರಕಾರ ರಾಜ್ಯಕ್ಕೆ 1,500 ಕೋಟಿ ರೂ.ಗಳನ್ನು ನೀಡಿದೆ. ಈ ಹಣದಲ್ಲಿ ಕನಿಷ್ಠ 50 ಕೋಟಿ ರೂ.ಗಳನ್ನಾದರೂ ಜಿಲ್ಲೆಗೆ ಬಿಡುಗಡೆ ಮಾಡದೆ ಕೇವಲ 50 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಇರುವ ಹಣವನ್ನು ಖಜಾನೆಯಲ್ಲಿಡದೆ ತ್ವರಿತವಾಗಿ ಬಿಡುಗಡೆ ಮಾಡಿ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ತಲಾ 50 ಕೋಟಿ ರೂ. ವಿಶೇಷ ಅನುದಾನ ನೀಡಲಾಗುತ್ತಿದೆಯೆಂದು ರಾಜ್ಯ ಸರಕಾರ ಹೇಳಿಕೊಳ್ಳುತ್ತಿದೆಯಾದರೂ ಇಲ್ಲಿಯವರೆಗೆ ಕೇವಲ 16 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಕಾಡಾನೆ ಹಾವಳಿ ನಿರಂತರವಾಗಿದ್ದು, ಅರಣ್ಯದಲ್ಲಿ ಆಹಾರ ಹಾಗೂ ನೀರಿನ ಕೊರತೆ ಎದುರಾಗಿದೆ. ಸರಕಾರ ಈ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಶಾಸಕ ಅಪ್ಪಚ್ಚು ರಂಜನ್ ಆರೋಪಿಸಿದರು.

ತಾಲೂಕು ಕಚೇರಿಗಳ ವಿರುದ್ಧ ಪ್ರತಿಭಟನೆ:

ಜಿಲ್ಲೆಯ ತಾಲೂಕು ಕಚೆೇರಿಗಳು ಕಲೆಕ್ಷನ್ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಬ್ರೋಕರ್‌ಗಳ ಮೂಲಕ ಮಾತ್ರ ಕೆಲಸ ಕಾರ್ಯಗಳು ನಡೆಯುತ್ತಿದೆಯೆಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಲೂಕು ಕಚೇರಿಗಳಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದ್ದು ಅರ್ಜಿದಾರರು ಪರದಾಡುತ್ತಿದ್ದಾರೆ. ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದ್ದು ಇದೊಂದು ಕಲೆಕ್ಷನ್ ಕೇಂದ್ರವಾಗಿದೆ. ತಾಲೂಕು ಕಚೆೇರಿಗಳ ಅವ್ಯವಸ್ಥೆ ವಿರುದ್ಧ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೋಮವಾರಪೇಟೆಯಲ್ಲಿ ಸೋಮವಾರ, ವೀರಾಜಪೇಟೆಯಲ್ಲಿ ಬುಧವಾರ ಹಾಗೂ ಮಡಿಕೇರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಗುವುದೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News