ತುಮರಿ ಸೇತುವೆ ನಿರ್ಮಾಣಕ್ಕೆ ಬಿಎಸ್‌ವೈ ಕಾರಣ: ಮೇಘರಾಜ್
ಸಾಗರ,ಎ.9: ತುಮರಿ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ಹಣ ಬಿಡುಗಡೆ ಮಾಡಿಸುತ್ತೇವೆ. ಬಜೆಟ್‌ನಲ್ಲಿ ಸೇತುವೆ ನಿರ್ಮಾಣಕ್ಕೆ ಹಣ ಮೀಸಲು ಇಡುತ್ತೇವೆ ಎಂದು ವೀರಾವೇಶದಿಂದ ಮಾತನಾಡಿದ ಕಾಂಗ್ರೆಸ್ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್ ಒತ್ತಾಯಿಸಿದ್ದಾರೆ.
ಇಲ್ಲಿನ ಸಾಗರ ಹೊಟೇಲ್ ವೃತ್ತದಲ್ಲಿ ಶುಕ್ರವಾರ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜಯೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ತುಮರಿ ಸೇತುವೆ ಕನಸು ಬಿತ್ತಿದವರು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು. ಅದನ್ನು ಅವರೆ ಸಾಕಾರಗೊಳಿಸುತ್ತಾರೆ. ಈಗಾಗಲೇ ತುಮರಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹಣ ಬಿಡುಗಡೆ ಮಾಡಲು ಯಡಿಯೂರಪ್ಪ ಅವರು ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿದ ಮನವಿಗೆ ಯಶಸ್ಸು ಸಿಕ್ಕಿದ್ದು, ಶೀಘ್ರ ಹಣ ಬಿಡುಗಡೆಯಾಗಿ, ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಜೊತೆಗೆ ಸಾಗರ ನಗರದ ಶಿವಪ್ಪ ನಾಯಕ ವೃತ್ತದಿಂದ ತುಮರಿ ಸೇತುವೆ ಮೂಲಕ ಕುಂದಾಪುರವನ್ನು ಸಂಪರ್ಕಿಸುವ ಸುಸಜ್ಜಿತ ಹೆದ್ದಾರಿ ಸಹ ನಿರ್ಮಾಣವಾಗಲಿದೆ ಎಂದರು. ಜಿಪಂ ಮಾಜಿ ಸದಸ್ಯ ಭೀಮನೇರಿ ಶಿವಪ್ಪ ಮಾತನಾಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಯಡಿಯೂರಪ್ಪ ಅವರು ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದಾರೆ. ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಪ್ರತಿಯೊಬ್ಬ ಕಾರ್ಯಕರ್ತರಿಗೆ, ಮುಖಂಡರಿಗೆ ಸಂತೋಷ ತಂದಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸದೃಢಗೊಳಿಸಲಾಗುವುದು ಎಂದು ತಿಳಿಸಿದರು. ಜಿಪಂ ಸದಸ್ಯರಾದ ಆರ್.ಸಿ.ಮಂಜುನಾಥ್, ರಾಜಶೇಖರ ಗಾಳಿಪುರ, ಕಲಸೆ ಚಂದ್ರಪ್ಪ, ಸತೀಶ್‌ಬಾಬು, ನಾಗರಾಜ್, ಪ್ರಕಾಶ್ ಕುಂಠೆ ವಿ.ಮಹೇಶ್, ಗಣೇಶ್ ಪ್ರಸಾದ್, ಪ್ರವೀಣ ಬಣಕಾರ್, ನಗರಸಭೆ ಸದಸ್ಯರಾದ ಶ್ರೀನಿವಾಸ್ ಮೇಸ್ತ್ರಿ, ನಾಗರತ್ನಾ ಸಿ.,ಮತ್ತಿತರರು ಉಪಸ್ಥಿತರಿದ್ದರು.