ಆಧುನಿಕತೆಯಿಂದ ಪುರಾತನ ಕಲೆಗಳ ಬಗ್ಗೆ ನಿರಾಸಕ್ತಿ: ಶಾಸಕ ಸೈಲ್
ಅಂಕೋಲಾ, ಎ. 9: ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಕಲೆಗೆ ಜನರು ಮಾರುಹೋಗಿ, ಪುರಾತನ ಕಲೆಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಸತೀಶ್‌ಸೈಲ್ ಹೇಳಿದ್ದಾರೆ. ಅವರು ಶುಕ್ರವಾರ ಕನಸಿಗದ್ದೆ ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯವರು ಆಯೋಜಿಸಿದ ‘ಅಂಕೋಲಾ ಕಲಾ ಮೇಳ 2016’ ಉದ್ಘಾಟಿಸಿ ಮಾತನಾಡಿದರು.
ಇಂದು ಅಂಕೋಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯವರು ಜಾನಪದ ಪದಗಳನ್ನು ಹೇಳಿಕೊಂಡು ಕಾರ್ಯನಿರ್ವಹಿಸುವ ಹಳೆ ತಲೆಮಾರಿನ ಸಾಮಗ್ರಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿರುವುದೇ ಹಿಂದಿನ ಕಲೆ ಈಗಲೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಕೆಲ ಯುವಕರಲ್ಲಿ, ಕಲೆ ಆಸಕ್ತಯುಳ್ಳವರಲ್ಲಿ ಎಲೆಮರೆಯಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳನ್ನು ಪ್ರದರ್ಶಿಸಿ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುವಲ್ಲಿ ಇದೊಂದು ಸುವರ್ಣ ಅವಕಾಶ ಎಂದರು. ಮಾಜಿ ಶಾಸಕ ಗಂಗಾಧರ ಭಟ್ ಮಾತನಾಡಿ, ಸಾಂಸ್ಕೃತಿಕ ಕಲೆಗಳು ಸುಮಾರು 500 ವರ್ಷಗಳಿಂದ ನಡೆದುಕೊಂಡು ಬಂದಿರುವುದು ಪುರಾಣಗಳು ಹೇಳಿವೆ. ಆದರೆ ಇತ್ತೀಚೆಗೆ ಮೊಬೈಲ್, ಟಿವಿ ಅಬ್ಬರ ಮಾಧ್ಯಮ ಪ್ರಸಾರಣೆಯಿಂದ ಹಳೆ ಕಲೆಗಳು ನಶಿಸಿಹೋಗುತ್ತಿವೆ. ಕಲೆಗಳನ್ನು ಜೀವಂತವಾಗಿ ಇಡಬೇಕಾದರೆ ಮನೆಯಿಂದಲೇ ಪ್ರೋತ್ಸಾಹ ಸಿಗುವ ಜೊತೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು. ಪುರಸಭೆ ಅಧ್ಯಕ್ಷ ಭಾಸ್ಕರ ಕೇ.ನಾರ್ವೇಕರ ಮಾತನಾಡಿ, ಯಾವುದೇ ಸಂಘಟನೆಯಲ್ಲಿ ಸಂಘಟಕರ ಪರಿಶ್ರಮ ಮುಖ್ಯ. ಆದರೆ ಅಂಕೋಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಿತಿಯವರು ಏರ್ಪಡಿಸಿದ ಕಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಲಾ ಮೇಳ ಕಾರ್ಯಕ್ರಮದ ಮೂಲಕ ಜಿಲ್ಲೆಗೆ ಮಾದರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಅಂತಾರಾಷ್ಟ್ರೀಯ ಕ್ರೀಡಾ ಪಟುಗಳಿಗೆ ಕೋಚ್‌ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಶೆಟ್ಟಿ, ಜಾನಪದ ಪುರಸ್ಕೃತೆ ಲಕ್ಷ್ಮೀ ಗೌಡ, ರಾಷ್ಟ್ರಮಟ್ಟದಲ್ಲಿ ಅಥ್ಲೆಟಿಕ್ ಕ್ರೀಡೆಯಲ್ಲಿ ಸಾಧನೆ ಮಾಡಿದ ನಾಗಶ್ರೀ ಗೋಪಾಲ ಗೌಡ, ನಾಟಿ ವೈದ್ಯ ಹನುಮಂತ ಗೌಡ, ಪಟ್ಟಣದಲ್ಲಿ ಯಾವುದೇ ಅನಾಥವಾಗಿ ಬಿದ್ದಿರುವ ಶವಗಳಿಗೆ ಸ್ಮಶಾನದಲ್ಲಿ ಮುಕ್ತಿ ನೀಡುವ ಕಾರ್ಯದ ಹಿನ್ನೆಲೆ ರಘುನಾಥ ಐಗಳವರಿಗೆ ಸನ್ಮಾನಿಸಿ ಗೌರವಿಸಿದರು. ತಾಪಂ ಸದಸ್ಯ ಮಂಜುನಾಥ ಡಿ. ನಾಯ್ಕ, ಸಾಕ್ಷಿತ ಹಾರ್ಡ್‌ವೇರ್ ಮಾಲಕ ಸುರೇಶ ಆರ್. ನಾಯಕ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಮು ಅರ್ಗೇಕರ್,ರವಿ ಶೆಟ್ಟಿ, ಸಾಂಸ್ಕೃ ತಿಕ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಗಂಗಾಧರ ಎನ್. ಭೋವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಪಪಂ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ, ಜಿಪಂ ನೂತನ ಸದಸ್ಯೆ ಸರಳಾ ದೀಕ್ಷಿತ ನಾಯಕ, ತಾಪಂ ನೂತನ ಸದಸ್ಯೆ ಸುಜಾತಾ ಗಾಂವಕರ, ಜಿಲ್ಲಾ ಸೇವಾದಳ ಅಧ್ಯಕ್ಷ ಸಾಯಿ ಗಾಂವಕರ, ತಾಲೂಕಾಧ್ಯಕ್ಷ ಪುರುಷೋತ್ತಮ ಡಿ. ನಾಯ್ಕ ಶಿರೂರು, ಪ್ರಮುಖರಾದ ಎನ್.ಡಿ.ಅಂಕೋಲೆಕರ, ಗಣಪತಿ ಬಾನಾವಳಿಕರ ಉಪಸ್ಥಿತರಿದ್ದರು. ಲಕ್ಷ್ಮೀ ಬಂಟ ಪ್ರಾರ್ಥಿಸಿದರು. ಸಮಿತಿ ಖಜಾಂಚಿ ಅರುಣ ಶೆಟ್ಟಿ ಸ್ವಾಗತಿಸಿದರು. ಸನ್ಮಾನ ಪತ್ರವನ್ನು ಅಶೋಕ ಜೆ. ನಾಯ್ಕ, ವಿಜಯಕುಮಾರ ವಾಯ್ ನಾಯ್ಕ ಓದಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಜಾಂಬಳೇಕರ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮಂಜುನಾಥ ಜಾಂಬಳೇಕರ, ಪದಾಧಿಕಾರಿಗಳಾದ ನೀಲೆಶ್ ಡಿ. ನಾಯ್ಕ, ಗಜು ವಿ. ನಾಯ್ಕ, ನರೇಶ ಎಂ. ರಾಯ್ಕರ, ರಜತ್ ನಾಯ್ಕ, ಅನಿಲ ಮಹಾಲೆ, ಬೊಮ್ಮಯ್ಯ ನಾಯ್ಕ ಇವರು ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.