×
Ad

ಅಕ್ರಮ ಮದ್ಯ ಮಾರಾಟದ ಆರೋಪ: ಪ್ರತಿಭಟನೆ

Update: 2016-04-09 22:15 IST

ಮೂಡಿಗೆರೆ, ಎ.9: ತಾಲೂಕಿನ ಹೆಸಗಲ್ ಗ್ರಾಪಂ ವ್ಯಾಪ್ತಿಯ ಶಕ್ತಿ ನಗರದ ಬಳಿ ವ್ಯಕ್ತಿಯೋರ್ವರ ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಮನೆಯ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಹೆಸಗಲ್ ಗ್ರಾಪಂ ವ್ಯಾಪ್ತಿಯ ಶಕ್ತಿನಗರದ ಅನೇಕ ವರ್ಷಗಳಿಂದ ಮನೆಗಳಲ್ಲಿ ಅಕ್ರಮ ಮಧ್ಯೆ ಮಾರಾಟ ಮಾಡಲಾಗುತ್ತಿದೆ. ಕಳೆದ 2 ವಾರಗಳ ಹಿಂದೆಯಷ್ಟೆ ಶಕ್ತಿನಗರಲ್ಲಿ ಕೆಲವರು ಮನೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದರು. ಈ ಹಿನ್ನಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿತ್ತಾದರೂ ಇಂದು ಶಕ್ತಿನಗರದ ವ್ಯಕ್ತಿಯೋರ್ವರು ವಾಹನವೊಂದರಲ್ಲಿ ಅಕ್ರಮ ಮದ್ಯ ತಂದು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಈ ಕುರಿತು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಕಲ್ಲಪ್ಪಹಂಡಿಬಾಗ್ ಹಾಗೂ ಪಿಎಸೈ ಗವಿರಾಜ್ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಆದರೆ ಮನೆಯಲ್ಲಿ ಅಕ್ರಮ ಮದ್ಯ ಕಂಡು ಬರಲಿಲ್ಲ, ಸುತ್ತಮುತ್ತಲ ಪ್ರದೇಶದಲ್ಲಿ ಬಚ್ಚಿಟ್ಟಿರುವ ಶಂಕೆಯಿಂದ ಹೆಚ್ಚಿನ ಪೊಲೀಸರನ್ನು ಕರೆಸಿ ಹುಡುಕಿದರೂ ಪತ್ತೆಯಾಗಲಿಲ್ಲ. ಇದರಿಂದ ಪ್ರತಿಭಟನೆಗಿಳಿದ ಸ್ಥಳೀಯರು ಕೆಲ ಕಾಲ ಗೊಂದಲಕ್ಕೀಡಾದರು.

ತಾವು ಸುದ್ದಿ ತಿಳಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದರೆ ಅಕ್ರಮ ಮದ್ಯ ಸಿಗುತ್ತಿತ್ತು. ಅಬಕಾರಿ ಇಲಾಖೆಯಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಲ್ಲಿ ಮನೆ, ಮನೆಗಳೇ ಬಾರ್‌ಗಳಾಗುತ್ತಿವೆ ಈ ಕುರಿತು ಯಾವುದೇ ಇಲಾಖೆಯೂ ಸರಿಯಾಗಿ ವಿಚಾರಿಸುತ್ತಿಲ್ಲ. ಅಬಕಾರಿ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ ಅದನ್ನು ಮುಚ್ಚುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News