ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಸಿಐಡಿಯಿಂದ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ
ಬೆಂಗಳೂರು, ಎ.9: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಪ್ರಕರಣದಲ್ಲಿ ಲಭ್ಯವಾಗಿರುವ ಮಾಹಿತಿಗಳನ್ನು ಉಲ್ಲೇಖಿಸಿ ರಾಜ್ಯ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲು ಮುಂದಾಗಿದ್ದಾರೆ.
ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಇದುವರೆಗೆ ಸಚಿವರ ವಿಶೇಷಾಧಿಕಾರಿ ಓಬಳರಾಜು ಸೇರಿ ಐವರು ಬಂಧನವಾಗಿದ್ದು, ಇಬ್ಬರು ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಈ ಗಂಭೀರ ಸೋರಿಕೆ ಪ್ರಕರಣದಲ್ಲಿ ಶಿಕ್ಷಣ ಇಲಾಖೆ, ಪಿಯು ಮಂಡಳಿ ಹಾಗೂ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿದೆ. ಅಲ್ಲದೆ, ಹಿರಿಯ ಅಧಿಕಾರಿಗಳ ವಿಚಾರಣೆಗೆ ಹೋದಾಗ ಸಿಐಡಿಗೆ ಒತ್ತಡ ಬಂದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸಿಐಡಿ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲು ನಿರ್ಧಾರ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಸಿಐಡಿ ವಶದಲ್ಲಿರುವ ಆರೋಪಿಗಳು ಕೆಲವು ಸೂಕ್ಷ್ಮ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿ ಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಹಿರಿಯ ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳು ಸೋರಿಕೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಇವರನ್ನು ವಿಚಾರಣೆಗೆ ಒಳಪಡಿಸುವ ಸಂದರ್ಭದಲ್ಲಿ ಪ್ರಭಾವಿ ಸಚಿವರ ಒತ್ತಡಗಳು ಸಿಐಡಿ ಅಧಿಕಾರಿಗಳಿಗೆ ಬಂದಿವೆ ಎಂದು ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಬಂಧಿತವಾಗಿರುವ ಪ್ರಮುಖರು ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಕರಣದಲ್ಲಿ ಮಧ್ಯವರ್ತಿಗಳಾಗಿದ್ದಾರೆ. ಆದರೆ, ಪ್ರಮುಖವಾಗಿ ಎಲ್ಲಿ ಸೋರಿಕೆ ಆಯಿತು ಹಾಗೂ ಇದರಲ್ಲಿರುವ ಪ್ರಮುಖ ವ್ಯಕ್ತಿಗಳು ಯಾರೆಂದು ಇದುವರೆಗೂ ಎಲ್ಲೂ ಬಹಿರಂಗಗೊಂಡಿಲ್ಲ. ಇದೆನ್ನೆಲ್ಲಾ ಗಮನಿಸಿದಾಗ ಕೆಲ ಪ್ರಭಾವಿ ಸಚಿವರು ಸಿಐಡಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಶಂಕಿಸಲಾಗಿದೆ.
ಇನ್ನಷ್ಟು ಸ್ಫೋಟಕದ ಮಾಹಿತಿ..!
ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಹೊಸ ಸ್ಫೋಟಕ ವಿಷಯಗಳು ಬಹಿರಂಗ ಗೊಳ್ಳುತ್ತಿದ್ದು, ಇದೀಗ ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲ ಮೌಲ್ಯಮಾಪನದಲ್ಲೂ ಡೀಲ್ ಮಾಡುತ್ತಿದ್ದ ಆತಂಕಕಾರಿ ವಿಷಯ ಹೊರ ಬಂದಿದೆ. ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಮಕ್ಕಳಿಗೆ ಹೆಚ್ಚಿನ ಅಂಕ ಪಡೆಯಲು ಪ್ರಶ್ನೆಪತ್ರಿಕೆ ಸೋರಿಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕಾಮೆಡ್ ಕೆ ಪರೀಕ್ಷೆ ಬರೆಯುವ ಅಭ್ಯರ್ಥಿಗೆ 25 ಲಕ್ಷ ರೂ. ನಗದು ನೀಡುತ್ತಿದ್ದರು ಎಂಬ ಮಾಹಿತಿ ವಿಚಾರಣೆಯಲ್ಲಿ ತಿಳಿದುಬಂದಿದೆ ಎನ್ನಲಾಗುತ್ತಿದೆ. ಇಬ್ಬರು ಬಿಲ್ಡರ್‌ಗಳಿಗೆ 10 ಲಕ್ಷ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಿದ್ದಾಗಿ ಆರೋಪಿ ಓಬಳರಾಜು ಹೇಳಿದ್ದಾನೆ ಎಂದು ಶಂಕಿಸಲಾಗಿದೆ.
ಆದರೆ, ಪ್ರಶ್ನೆಪತ್ರಿಕೆ ಖರೀದಿ ಮಾಡಿದ್ದ ಇಬ್ಬರು ಬಿಲ್ಡರ್‌ಗಳು ನಾಪತ್ತೆಯಾಗಿದ್ದು, ಹಳೇ ಮಾಹಿತಿಗೆ ಸಾಕ್ಷಿ ಕಲೆ ಹಾಕೋದು ಹೇಗೆ ಎಂಬ ಪ್ರಶ್ನೆ ಇದೀಗ ಸಿಐಡಿ ಅಧಿಕಾರಿಗಳ ಮುಂದಿದೆ.