ವಿದ್ಯಾಲಯಗಳು ಭವಿಷ್ಯ ರೂಪಿಸುವ ಶ್ರದ್ಧಾ ಕೇಂದ್ರಗಳು
ಸಾಗರ,ಎ.10: ವಿದ್ಯಾಲಯಗಳು ಭವಿಷ್ಯವನ್ನು ರೂಪಿಸುವ ಶ್ರದ್ಧಾ ಕೇಂದ್ರಗಳಿದ್ದಂತೆ. ವಿದ್ಯಾಲಯಗಳ ಅಭಿವೃದ್ಧಿ ಸರಕಾರದ ಹೊಣೆ ಮಾತ್ರವಲ್ಲ. ಸ್ಥಳೀಯವಾಗಿರುವ ಪೋಷಕರು, ಸಾರ್ವಜನಿಕರದ್ದೂ ಆಗಿರುತ್ತದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಇಲ್ಲಿನ ಬೆಳಲಮಕ್ಕಿ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ರವಿವಾರ ಉದ್ಘಾಟಿಸಿ, ಸುವರ್ಣ ಮಹೋತ್ಸವದ ಅಂಗವಾಗಿ ಹೊರತರಲಾದ ಸುವರ್ಣ ಗರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ವ್ಯಕ್ತಿಯೊಬ್ಬನ ಭವಿಷ್ಯ ರೂಪಿಸುವ ಕೆಲಸವನ್ನು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಮಾಡುತ್ತವೆ. ಅಂತಹ ಶಾಲೆ ಐವತ್ತು ವರ್ಷಗಳ ಕಾಲ ನಿರಂತರತೆಯನ್ನು ಕಾಯ್ದುಕೊಂಡಿದೆ ಎಂದರೆ ಶಾಲೆಯಲ್ಲಿ ಓದಿದ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಹೆಮ್ಮೆಯ ಸಂಗತಿ. ಶಾಲೆಯನ್ನು ನೂರು ವರ್ಷಗಳ ಕಾಲ ಇನ್ನಷ್ಟು ಉನ್ನತ ಸ್ಥಿತಿಯಲ್ಲಿ ಕೊಂಡೊಯ್ಯುವ ಸಂಕಲ್ಪವನ್ನು ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಮಾಡಬೇಕು ಎಂದು ತಿಳಿಸಿದರು. ಬದಲಾದ ದಿನಮಾನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಪೋಷಕರ ವ್ಯಾಮೋಹ ಹೆಚ್ಚುತ್ತಿದೆ. ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಸಿಗುತ್ತಿದೆ. ಸರಕಾರ ಸಹ ಶೈಕ್ಷಣಿಕ ಚಟುವಟಿಕೆಯನ್ನು ಆಧುನೀಕರಣಗೊಳಿಸಲು ಹೆಚ್ಚು ಒತ್ತು ನೀಡಿದೆ. ಪೋಷಕರ ಮನಸ್ಥಿತಿ ಬದಲಾಯಿಸುವ ಕೆಲಸವಾಗಬೇಕು. ನಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿಯೆ ಓದಿಸುತ್ತೇವೆ ಎನ್ನುವ ಸಂಕಲ್ಪ ಪೋಷಕವೃಂದ ಮಾಡಬೇಕು ಎಂದು ಸಲಹೆ ನೀಡಿದರು. ಪ್ರತಿಯೊಂದು ಮಗುವಿನಲ್ಲೂ ಅಂತರ್ಗತವಾಗಿ ಪ್ರತಿಭೆ ಇರುತ್ತದೆ. ಶಾಲಾ ಹಂತದಲ್ಲಿ ಅದನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು. ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊರತರುವ ಸ್ಮರಣ ಸಂಚಿಕೆಗಳಲ್ಲಿ ಮಕ್ಕಳಲ್ಲಿರುವ ಸಾಹಿತ್ಯಾಸಕ್ತಿ ಬೆಳಕಿಗೆ ಬರಲು ಸಾಧ್ಯವಿದೆ. ಇಂತಹ ಉತ್ಸವಗಳಲ್ಲಿ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಮಕ್ಕಳ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾರಾಯಣ ಗೌಡ, ಪೋಷಕರು ಶಾಲೆಗಳ ಜೊತೆ ನೇರ ಸಂಪರ್ಕವನ್ನು ಹೊಂದಿರಬೇಕು. ಮಕ್ಕಳನ್ನು ಶಾಲೆಗೆ ಕಳಿಸಿದ ತಕ್ಷಣ ತಮ್ಮ ಜವಾಬ್ದಾರಿ ಮುಗಿಯಿತು ಎನ್ನುವ ಮನೋಭಾವ ಸರಿಯಲ್ಲ. ಶಾಲೆಯೊಂದು 50 ವರ್ಷ ಕಳೆದಿದೆ ಎಂದರೆ ಶಾಲೆಯ ಬೆಳವಣಿಗೆ ಹಿಂದೆ ಇರುವ ಎಲ್ಲರ ಶ್ರಮವನ್ನು ಇಂತಹ ವೇದಿಕೆಗಳ ಮೂಲಕ ಚರ್ಚಿಸಿ, ಭವಿಷ್ಯದಲ್ಲಿ ಶಾಲೆಯನ್ನು ಇನ್ನಷ್ಟು ಉನ್ನತ ಸ್ಥಿತಿಗೆ ಕೊಂಡೊಯ್ಯುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.