×
Ad

ಪೂರ್ಣಗೊಳ್ಳದ ಪೈಪ್‌ಲೈನ್ ಕಾಮಗಾರಿ: ಬರಿದಾದ ನೀರಿನ ಮೂಲ

Update: 2016-04-10 23:07 IST

ಶ್ರೀನಿವಾಸ ಬಾಡಕರ 

ಕಾರವಾರ, ಎ.10: ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳು ಸಮಸ್ಯೆಗಳಿಂದ ನಿಷ್ಪ್ರಯೋಜಕವಾಗಿದ್ದು, ಸುತ್ತಮುತ್ತಲಿನ ಜನರಿಗೆ ಸರಕಾರದ ಯೋಜನೆಗಳಿದ್ದರೂ ದಾಹ ತೀರಿಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ.

ಕೋಟ್ಯಂತರ ರೂ. ವ್ಯಯಿಸಿ ನಿರ್ಮಾಣಗೊಂಡ ಘಟಕಗಳು ಉಪ್ಪು ನೀರಿನ ಸಮಸ್ಯೆ, ವಿದ್ಯುತ್ ಕೊರತೆ, ಪೂರ್ಣಗೊಳ್ಳದ ಪೈಪ್‌ಲೈನ್ ಕಾಮಗಾರಿ, ಮಳೆ ಅಭಾವದ ಕಾರಣ ನೀರಿನ ಅಲಭ್ಯ, ಗುತ್ತಿಗೆದಾರರ ನಿರ್ಲಕ್ಷ್ಯ ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದು, ಜನರಿಗೆ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿವೆ. ಕಾರವಾರ ತಾಲೂಕಿನ ಗೋಟೆಗಾಳಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ 10.66 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೀರು ಸರಬರಾಜು ಘಟಕವು ಕಳೆದ ನಾಲ್ಕೈದು ತಿಂಗಳಿಂದ ಸ್ಥಗಿತಗೊಂಡಿದೆ. ಘಟಕಕ್ಕೆ ಉಪ್ಪುನೀರು ಸೇರುವುದರಿಂದ ಗೋಟೆಗಾಳಿ ಸೇರಿದಂತೆ ಮಾಜಾಳಿವರೆಗಿನ ಹತ್ತು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಈ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿದೆ.

ಕಾಳಿ ನದಿ ನೀರನ್ನು ಹತ್ತು ಗ್ರಾಮಗಳಿಗೆ ಪೂರೈಸುವ ಉದ್ದೇಶದಿಂದ ಆರಂಭಗೊಂಡ ಘಟಕಕ್ಕೆ ಈ ಬಾರಿ ಉಪ್ಪುನೀರು ನುಗ್ಗುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸಮರ್ಪಕವಾಗಿ ಮಳೆಯಾಗದ ಪರಿಣಾಮ ಕಾಳಿ ನದಿಯಲ್ಲಿ ಸಿಹಿ ನೀರು ಹರಿಯುತ್ತಿಲ್ಲ. ಉಬ್ಬರ ಏರಿಳಿತದ ಪರಿಣಾಮ ಬಹುದೂರದವರೆಗೂ ನದಿ ನೀರಿಗೆ ಸಮುದ್ರದ ಉಪ್ಪುನೀರು ಸೇರುತ್ತಿದೆ. ಹೀಗಾಗಿ ನದಿಯಿಂದ ನೀರನ್ನು ಎತ್ತಿ ಪೂರೈಕೆ ಮಾಡಲಾಗುತ್ತಿಲ್ಲ.

ತಾಲೂಕಿನ ಕೆರವಡಿ ಸೇರಿದಂತೆ 14 ಹಳ್ಳಿಗಳಿಗೆ ನೀರು ಪೂರೈಸಲು ಆರಂಭಿಸಿರುವ ಕೆರವಡಿ ಯೋಜನೆ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. 8.85 ಕೋಟಿ ರೂ.ಗೆ ಟೆಂಡರ್ ಪಡೆದಿರುವ ಶಿರಸಿ ಮೂಲದ ಗುತ್ತಿಗೆದಾರರು ಆಮೆಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದು, ಯೋಜನೆಗೆ ಹಿನ್ನಡೆಯಾಗಿದೆ.

ಈಗಾಗಲೇ 2.13 ಕೋಟಿ ರೂ.ಯೋಜನೆಗೆ ಖರ್ಚು ಮಾಡಲಾಗಿದೆಯಾದರೂ ಕಾಮಗಾರಿ ವೇಗ ಪಡೆಯುತ್ತಿಲ್ಲ. ಟೆಂಡರ್ ಪ್ರಕಾರ ಈ ಕಾಮಗಾರಿ ಈಗಾಗಲೇ ಪೂರ್ಣಗೊಂಡು ಜನತೆ ಸೇವೆಗೆ ಮುಕ್ತವಾಗಬೇಕಿತ್ತು. ಆದರೆ, ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಇಲಾಖೆಯಿಂದ ಅವಧಿ ವಿಸ್ತರಣೆಗೆ ಮನವಿ ಮಾಡುತ್ತಿದ್ದಾರೆ ಹೊರತು, ಕೆಲಸ ಮುಗಿಸುತ್ತಿಲ್ಲ.

ಕೆಲಸ ವೇಗಗೊಳಿಸುವಂತೆ ಗುತ್ತಿಗೆದಾರರಿಗೆ ಹೇಳಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ನಿಯಮಾವಳಿ ಪ್ರಕಾರ ದಂಡ ವಿಧಿಸಲಾಗುತ್ತದೆ. ಗುತ್ತಿಗೆದಾರರನ್ನು ಏಕಾಏಕಿ ಕಪ್ಪುಪಟ್ಟಿಗೆ ಸೇರಿಸಿದರೆ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗುತ್ತದೆ. ಮತ್ತೆ ಮರು ಟೆಂಡರ್ ಕರೆದು, ಕಾಮಗಾರಿ ಆರಂಭಿಸುವುದರಲ್ಲಿ ಸಮಯ ಕಳೆದು ಹೋಗುತ್ತದೆ ಎಂದು ವಿವರಿಸುತ್ತಾರೆ ಇಲಾಖೆ ಅಧಿಕಾರಿಗಳು.

ಕುಮಟಾ ತಾಲೂಕಿನ ಗೋಕರ್ಣದಲ್ಲಿ 6.81 ಕೋಟಿ ರೂ. ವೆಚ್ಚದಲ್ಲಿ ಎಂಟು ಗ್ರಾಮಗಳಿಗೆ ನೀರು ಪೂರೈಸುವ ಘಟಕ ನಿರ್ಮಿಸಲಾಗಿದೆ. ಆದರೆ, ನೀರು ಪೂರೈಸಲು ಅಗತ್ಯವಿರುವ ಪೈಪ್‌ಲೈನ್ ಸೇರಿದಂತೆ ನೆಟ್‌ವರ್ಕಿಂಗ್ ಕಾಮಗಾರಿ ಬಾಕಿ ಉಳಿದಿದೆ.

ಹೀಗಾಗಿ ಗೋಕರ್ಣದ ಘಟಕದಿಂದ ಯೋಜನೆ ವ್ಯಾಪ್ತಿಯ ಸುತ್ತಲಿನ ಹಳ್ಳಿಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಯೋಜನೆಯಡಿ ಸಮರ್ಪಕವಾಗಿ ನೀರು ಪೂರೈಸಲು 12 ಕೋಟಿ ರೂ. ವೆಚ್ಚದಲ್ಲಿ ಪೂರಕ ಕಾಮಗಾರಿ ಕೈಗೊಳ್ಳುವ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ ಎಂದು ಗ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿ ಕೆ.ಸಿ. ಮೆಣಸಿ ತಿಳಿಸಿದ್ದಾರೆ.

                 

ಕೆಪಿಟಿಸಿಎಲ್ ಕದ್ರಾ ಡ್ಯಾಂನಿಂದ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ಬಿಟ್ಟಾಗ ಮಾತ್ರ ನದಿ ಕೆಳ ಭಾಗದಲ್ಲಿ ಕುಡಿಯಲು ಯೋಗ್ಯ ನೀರು ಹರಿಯುತ್ತದೆ. ಅಂತಹ ಸಂದರ್ಭದಲ್ಲಿ ಮಾತ್ರ ಘಟಕದ ಪಂಪ್ ಹೌಸ್‌ನಿಂದ ನೀರನ್ನು ಎತ್ತಿ, ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. -ಕೆ.ಸಿ. ಮೆಣಸಿ, ಗ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News