×
Ad

ಶಾಂತೆಯಂಡ ಕಪ್-2016 ಹಾಕಿ ಉತ್ಸವಕ್ಕೆ ವರ್ಣರಂಜಿತ ಚಾಲೆ

Update: 2016-04-10 23:12 IST

ಮಡಿಕೇರಿ,ಎ.10.ಕೊಡವ ಕುಟುಂಬ ತಂಡಗಳ ನಡುವೆ ನಡೆಯುತ್ತಿರುವ ಶಾಂತೆಯಂಡ ಕಪ್-2016 ಹಾಕಿ ಉತ್ಸವಕ್ಕೆ ವರ್ಣರಂಜಿತ ಚಾಲನೆ ದೊರೆತಿದ್ದು, ಕೊಡವ ಹಾಕಿ ಅಕಾಡಮಿಯ ಸಹಕಾರದೊಂದಿಗೆ ಶಾಂತೆಯಂಡ ಕುಟುಂಬಸ್ಥರ ನೇತೃತ್ವದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮೈದಾನದಲ್ಲಿ 20ನೆ ವರ್ಷದ ಹಾಕಿ ಪಂದ್ಯಾಟ ಆರಂಭಗೊಂಡಿದೆ.

 ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು, ಹಾಕಿ ಉತ್ಸವವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತ ದೇಶ ಸರ್ವರೂ ಒಗ್ಗೂಡಿ ಅಖಂಡವಾಗಿ ಮುನ್ನಡೆಯಲು ರಾಷ್ಟ್ರ ಪ್ರೇಮದೊಂದಿಗೆ ಕ್ರೀಡಾ ಸ್ಫೂರ್ತಿಯೂ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದರು. ಸತತ 20 ನೆ ವರ್ಷಕ್ಕೆ ಕಾಲಿರಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ದಾಖಲೆಗೆ ಈ ಹಿಂದೆಯೆ ದಾಖಲಾಗಿದ್ದು, ಇದೀಗ ಗಿನ್ನಿಸ್ ದಾಖಲೆಯತ್ತ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಚಾರವೆಂದರು. ಮನುಷ್ಯ ಮನುಷ್ಯರ ನಡುವಿನ ಪ್ರೀತಿ ವಿಶ್ವಾಸ ಕುಸಿಯುತ್ತಿದ್ದು, ಸಂಸ್ಕೃತಿ ಸಂಪ್ರದಾಯಗಳು ಮರೆಯಾಗುತ್ತಿವೆ. ಯಾವ ಸಮಾಜದಲ್ಲಿ ಪ್ರೀತಿ ವಿಶ್ವಾಸಗಳು ಗಾಢವಾಗಿರುತ್ತದೋ ಅಂತಹ ಸಮಾಜ ಅದ್ಭುತವಾಗಿ ಎದ್ದು ನಿಲ್ಲುತ್ತದೆ. ಹಾಕಿ ಕ್ರೀಡೆಯ ಮೂಲಕ ಸಮುದಾಯದ ನಡುವಿನ ಬಾಂಧವ್ಯವನ್ನು ವೃದ್ಧಿಸುವುದರೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆೆಸಿಕೊಂಡು ಜಗತ್ತಿಗೆ ನೀಡುವ ಚಿಂತನೆಯಡಿ ಹಾಕಿ ಉತ್ಸವ ಆರಂಭಿಸಿದ ಪಾಂಡಂಡ ಕುಟ್ಟಪ್ಪ ಅವರ ಪರಿಕಲ್ಪನೆ ಅದ್ಭುತವಾಗಿದೆ ಎಂದು ಬಣ್ಣಿಸಿದರು.

ರಾಷ್ಟ್ರ ಪ್ರೇಮದ ಉಜ್ವಲ ಸಂಸ್ಕೃತಿಯನ್ನು ನೀಡಿದ ನಾಡು ಕೊಡಗು. ರಾಷ್ಟ್ರಪ್ರೇಮದ ಅಂತಃಸ್ಫೂರ್ತಿಯೊಂದಿಗೆ ಕ್ರೀಡಾ ಸ್ಫೂರ್ತಿಯನ್ನು ಮೈಗೂಡಿಸಿಕೊಂಡಲ್ಲಿ ಅದು ಪರಸ್ಪರರನ್ನು ಒಗ್ಗೂಡಿಸಬಲ್ಲುದೆಂದು ಸದಾನಂದ ಗೌಡ ಹೇಳಿದರು.

ಹಾಕಿ ಉತ್ಸವದ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ಮಾತನಾಡಿ, ಈ ಹಿಂದಿನ ಕಲಿಯಂಡ ಕಪ್ ಹಾಕಿ ಉತ್ಸವದಲ್ಲಿ 281 ತಂಡಗಳು ಪಾಲ್ಗೊಂಡಿದ್ದವು, ಈ ಬಾರಿ 299 ತಂಡಗಳು ಪಾಲ್ಗೊಂಡಿರುವುದು ಸಂತಸ ತಂದಿದೆ. ಪುರುಷರು ಮತ್ತು ಮಹಿಳೆಯರು ಒಗ್ಗೂಡಿ ಇಂತಹ ಒಂದು ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳುವ ಪರಂಪರೆಯನ್ನು ವಿಶ್ವದ ಯಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

 ಸೈನಿಕ ಪರಂಪರೆ ಮತ್ತು ಹಾಕಿ ಕ್ರೀಡೆಯಿಂದ ಕೊಡಗು ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದು, ಯುವ ಸಮೂಹಕ್ಕೆ ಪ್ರೇರಣಾದಾಯಕರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತ ರತ್ನವನ್ನು ನೀಡಬೇಕೆಂದು ಇದೇ ಸಂದರ್ಭ ಒತ್ತಾಯಿಸಿದರು.

      

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಉತ್ಸವಕ್ಕೆ 2008ರಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಮೊದಲ ಬಾರಿಗೆ 5 ಲಕ್ಷ ರೂ. ಅನುದಾನವನ್ನು ಒದಗಿಸಿದ್ದು, ಇದೀಗ ರಾಜ್ಯ ಸರಕಾರ 40 ಲಕ್ಷ ರೂ. ಒದಗಿಸಿದೆ. ಇಂತಹ ಹಾಕಿ ಉತ್ಸವದ ಆಯೋಜನೆಗೆ ಶಾಶ್ವತವಾದ ಅನುದಾನ ದೊರಕುವಂತಾಗಬೇಕೆಂದು ಹೇಳಿದರು.ಶಾಸಕರಾದ ಅಪ್ಪಚ್ಚುರಂಜನ್ ಮಾತನಾಡಿ, ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವದಿಂದ ಕೊಡಗಿಗೆ ವಿಶ್ವದಲ್ಲೆ ಹೆಸರು ಬಂದಿದ್ದು, ಹಾಕಿ ಉತ್ಸವ ನಿರಂತರವಾಗಿ ನಡೆಯಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಂತೆಯಂಡ ಕಪ್ ಹಾಕಿ ಉತ್ಸವದ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಹಾಕಿ ಕ್ರೀಡೆಗೆ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ಬೆಂಬಲಗಳ ಅಗತ್ಯವಿದೆ. ಈ ಬಾರಿಯ ಉತ್ಸವದಲ್ಲಿ 299 ತಂಡಗಳು, 5,000 ಹಾಕಿ ಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಹಾಕಿ ಉತ್ಸವದ ಆಯೋಜನೆಗೆ ಸಂಸದ ಪ್ರತಾಪ ಸಿಂಹ ಅವರು ತಮ್ಮ ಅನುದಾನದಿಂದ 30 ಲಕ್ಷ ರೂ. ಅನುದಾನವನ್ನು ಒದಗಿಸಿದ್ದಾರೆ. ರಾಜ್ಯ ಸರಕಾರ ಉತ್ಸವಕ್ಕೆ ಶಾಶ್ವತವಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಮನವಿ ಮಾಡಿದರು

 ಮಾಜಿ ಒಲಂಪಿಯನ್ ಹಾಗೂ ಹಾಕಿ ಕೂರ್ಗ್ ಅಧ್ಯಕ್ಷರಾದ ಪೈಕೇರ ಕಾಳಯ್ಯ ಮಾತನಾಡಿದರು. ಮಾಜಿ ಸಚಿವ ಎಂ.ಸಿ. ನಾಣಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೂವೇರ ಸುಬ್ಬಯ್ಯ, ಮುಳಿಯ ಗ್ರೂಪ್‌ನ ಕೇಶವ ಪ್ರಸಾದ್ ಮುಳಿಯ, ಮಾಜಿ ಒಲಂಪಿಯನ್ ಅಂಜಪರವಂಡ ಸುಬ್ಬಯ್ಯ, ಅಂತಾರಾಷ್ಟ್ರೀಯ ಮಾಜಿ ಅಥ್ಲಿಟ್ ಅರ್ಜುನ್ ದೇವಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಅಯ್ಯಪ್ಪ, ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ,ಶ್ರೀದೇವಿ ಎಜುಕೇಷನ್ ಟ್ರಸ್ಟ್‌ನ ಸದಾನಂದ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News