×
Ad

‘ಸರಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನದ ಅಗತ್ಯ ಇದೆ’

Update: 2016-04-10 23:13 IST

ಸೊರಬ,ಎ.10: ಪ್ರಸ್ತುತ ದಿನಮಾನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯಲ್ಲೂ ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಸ್. ಬಂಗಾರಪ್ಪ ಹೇಳಿದ್ದಾರೆ.ರವಿವಾರ ಪಟ್ಟಣದ ರಾಘವೇಂದ್ರ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆ ಸರಕಾರಿ ಶಾಲೆಗಳು ಉತ್ತಮ ಶಿಕ್ಷಣವನ್ನು ನೀಡುತ್ತಾ ಶತಮಾನೋತ್ಸವ ಆಚರಿಸಿಕೊಳ್ಳುತ್ತಿವೆ. ಆದರೆ, ಪಟ್ಟಣದ ಬಾಲಕಿಯರ ಶಾಲೆಯೊಂದರಲ್ಲಿ ಸಾವಿರಾರು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ನೀಡಬೇಕಿದೆ. ಸರಕಾರ ನೀಡುವ ಅನುದಾನ ಕೇವಲ ಕಟ್ಟಡಗಳನ್ನು ದುರಸ್ತಿ ಮಾಡಲು ಸಹ ಸಾಕಾಗುತ್ತಿಲ್ಲ. ಕ್ಷೇತ್ರದಲ್ಲಿ 308 ಶಾಲೆಗಳಿದ್ದರೂ ಕೇವಲ ರೂ. 40ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಎಲ್ಲಾ ಶಾಲೆಗಳನ್ನು ಏಕಕಾಲದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ಕ್ಷೇತ್ರದ ಎಲ್ಲ್ಲ್ಲಾ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಇದೇ ಶಾಲೆಯಲ್ಲಿ ಶಿಕ್ಷಣ ಪಡೆದು, ಶಿಕ್ಷಕಿಯಾಗಿ 35ವರ್ಷ ಕಾರ್ಯನಿರ್ವಹಿಸಿ ನಿವೃತ್ತಿಯಾದ 95ರ ವಯೋವೃದ್ಧೆ ಈರಮ್ಮ ಹಾಗೂ ಶಾಲೆಯಲ್ಲಿ ಕಾರ್ಯನಿರ್ವಹಿಸಿದ 85ರ ವಯೋವೃದ್ಧೆ ಅಮ್ಮಾಯಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಎಚ್.ಎಸ್. ಪಾರ್ವತಮ್ಮ ಅವರ ಸಂಪಾದಕೀಯದಲ್ಲಿ ರಚಿಸಿದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶತಮಾನೋತ್ಸವ ಅಂಗವಾಗಿ ಪುಸ್ತಕ ಮಳಿಗೆ, ಹಳೆ ನಾಣ್ಯ ಮತ್ತು ಕರಕುಶಲ ವಸ್ತು ಪ್ರದರ್ಶನ, ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕೆ. ಬಸವಣಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಜೈ ಶೀಲಪ್ಪ, ಸದಸ್ಯರಾದ ನೀಲಮ್ಮ ಸುರೇಶ್, ಬರಗಿ ನಿಂಗಪ್ಪ, ಪಪಂ. ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಂ.ಡಿ ಉಮೇಶ್, ಮಹೇಶ್ ಗೌಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ್, ಪ.ಪಂ ಮುಖ್ಯಾಧಿಕಾರಿ ಎಂ.ಕೆ. ಸುರೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರೇವಣ್ಣ ಕುಮಾರ್, ಶಾಲೆಯ ಮುಖ್ಯ ಶಿಕ್ಷಕಿ ಎಚ್.ಎಸ್. ಪಾರ್ವತಮ್ಮ, ಎಚ್.ಎಸ್, ಗೌರವ ಸಲಹೆಗಾರ ಎಚ್. ಎಸ್. ಮಂಜಪ್ಪ, ಮುಕ್ತಬಾಯಿ ಭಟ್, ಸುನಂದಾ, ದೀಪಕ್, ಮಂಜುನಾಥ್, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News