×
Ad

ಉತ್ತಮ ಆರೋಗ್ಯ ಹೊಂದುವುದು ಸಂವಿಧಾನಾತ್ಮಕ ಹಕ್ಕು

Update: 2016-04-10 23:14 IST

ಶಿಕಾರಿಪುರ,ಎ.10: ದೇಶದಲ್ಲಿನ ಪ್ರತಿಯೊಬ್ಬ ಪ್ರಜೆ ಉತ್ತಮ ಆರೋಗ್ಯವನ್ನು ಹೊಂದುವುದು ಸಂವಿಧಾನಾತ್ಮಕ ಹಕ್ಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದು, ಈ ದಿಸೆಯಲ್ಲಿ ಸರಕಾರ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ಸುಧಾರಣೆಗಾಗಿ ನೀಡುತ್ತಿರುವ ಅತೀ ಹೆಚ್ಚಿನ ಅನುದಾನದ ಸದುಪಯೋಗವಾಗಬೇಕಾಗಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಫಾರೂಕ್ ಝಾರೆ ತಿಳಿಸಿದ್ದಾರೆ.

 ರವಿವಾರ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ನಡೆದ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೆ ಹಣ,ಆಸ್ತಿ,ಬಂಗಲೆ,ಸಂಪತ್ತು ಮಿಗಿಲಾಗಿ ಸದೃಢವಾದ ಆರೋಗ್ಯ ಬಹು ಮುಖ್ಯ ಎಂದ ಅವರು, ಇತ್ತೀಚಿನ ವರ್ಷದಲ್ಲಿ ಜನಿಸಿದ ಮಗು ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದು, ಇಂತಹ ಸ್ಥಿತಿಯಲ್ಲಿ ಪೋಷಕರು ತಮ್ಮ ಜೀವನವನ್ನು ಮಗುವಿನ ಸೇವೆಗಾಗಿ ಮೀಸಲಿಡಬೇಕಾದ ಘೋರ ಪರಿಸ್ಥಿತಿ ಹಲವು ಕುಟುಂಬಗಳಲ್ಲಿ ಸಾಮಾನ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

 ಪ್ರಾಚೀನ ಕಾಲದಲ್ಲಿ ಸದೃಢ ಆರೋಗ್ಯ ದಷ್ಟಪುಷ್ಟ ಶರೀರ ದಿಂದಾಗಿ ಮನುಷ್ಯನ ಆಯಸ್ಸು ಸರಾಸರಿ 100 ರಿಂದ 120 ವರ್ಷಗಳಾಗಿದ್ದು, ಇದೀಗ ಜಗತ್ತಿನ ಜೈವಿಕ ಮಂಡಳದಲ್ಲಿನ ಬದಲಾವಣೆ,ಆಹಾರ ಪದ್ಧ್ದತಿ ದೈನಂದಿನ ಪದ್ಧತಿಯಲ್ಲಿನ ಏರುಪೇರಿನಿಂದಾಗಿ ಆಯಸ್ಸು ಕ್ಷೀಣಿಸುತ್ತಿದೆ ಎಂದ ಅವರು, ಪ್ರತಿ ವ್ಯಕ್ತಿ ವಿವಿಧ ರೀತಿಯ ಕಾಯಿಲೆಯಿಂದ ತೊಂದರೆ ಅನುಭವಿಸುತ್ತಿದ್ದಾನೆ ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮಾತನಾಡಿ, ದೇಶದಲ್ಲಿ 6.5 ಲಕ್ಷ ಅಂಧರಿದ್ದು, ವಿವಿಧ ಕಾರಣಗಳಿಂದ ನಿತ್ಯ ಸಾಯುತ್ತಿರುವ 62 ಸಾವಿರ ವ್ಯಕ್ತಿಗಳ ಕಣ್ಣು ದಾನವಾಗಿ ನೀಡಿದಲ್ಲಿ 11 ದಿನದಲ್ಲಿ ದೇಶದಲ್ಲಿನ ಅಂಧರ ಸಂಖ್ಯೆ ಪೂರ್ಣ ಕ್ಷೀಣಿಸಲಿದೆ ಎಂದರು. ತಾ.ವೈದ್ಯಾಧಿಕಾರಿ ಡಾ.ಮಂಜುನಾಥ ನಾಗಲೀಕರ್ ಮಾತನಾಡಿ, ಮಧುಮೇಹ ಅಂಧತ್ವಕ್ಕೆ ಕಾರಣವಾಗಲಿದ್ದು, ಭಾರತ ಇದೀಗ ಮಧುಮೇಹದ ರಾಜಧಾನಿಯಾಗಿ ಬದಲಾಗುತ್ತಿದೆ ಎಂದ ಅವರು 30 ವರ್ಷ ಮೀರಿದ ಪ್ರತಿಯೊಬ್ಬರೂ ಕಾಲಕಾಲಕ್ಕೆ ಸಕ್ಕರೆ, ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಲು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ದುಷ್ಯಂತ್ ಮಾತನಾಡಿ, ಪ್ರತಿ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ರೋಗ ವಿಭಾಗದಲ್ಲಿ ಉಚಿತವಾಗಿ 30 ವರ್ಷ ಮೀರಿದ ಪ್ರತಿಯೊಬ್ಬರಿಗೂ ಸಕ್ಕರೆ, ರಕ್ತದೊತ್ತಡ ಪರೀಕ್ಷೆಯನ್ನು ನೇರವಾಗಿ ನಡೆಸಲಾಗುತ್ತಿದು,್ದ ಈ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.ವೇದಿಕೆಯಲ್ಲಿ ಶಿವಮೊಗ್ಗ ಶಂಕರ್ ಕಣ್ಣಿನ ಆಸ್ಪತ್ರೆಯ ಡಾ.ಕಾವ್ಯಾ,ಡಾ.ನೇತ್ರಾ,ಸರಕಾರಿ ಆಸ್ಪತ್ರೆಯ ಡಾ.ವಸಂತ್,ಡಾ.ಪ್ರಮೋದ್, ಡಾ.ಶ್ರೀನಿವಾಸ್, ಡಾ.ಸುರೇಶ್,ಡಾ.ಈರಣ್ಣ,ಗ್ರೇಡ್ 1 ಸಿಸ್ಟರ್ ಅನಸೂಯ,ನ್ಯಾಯಾಲಯದ ಸಿಬ್ಬಂದಿ ಶಫಿ ಅರ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News