×
Ad

ಕುಡಿಯುವ ನೀರಿನ ನಿರ್ವಹಣೆಗೆ ಸರಕಾರ ಸಿದ್ಧ: ಎಚ್.ಕೆ.ಪಾಟೀಲ್

Update: 2016-04-10 23:18 IST

 ತರೀಕೆರೆ, ಎ.10: ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಗ್ರಾಮೀಣ ಜನತೆಯನ್ನು ಹಂಗಿನ ಬದುಕಿನಿಂದ ಹಕ್ಕಿನ ಬದುಕಿನತ್ತ ಕೊಂಡೊಯ್ಯಲು ರಾಜ್ಯ ಸರಕಾರ ಸಂಕಲ್ಪ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು

 ಅವರು ಶಾಸಕರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನರೇಗಾದ ಮೂಲ ಉದ್ದೇಶ ಉದ್ಯೋಗ ಸೃಷ್ಟಿಸುವುದಾಗಿದ್ದು, ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಕುಡಿಯುವ ನೀರಿನ ನಿರ್ವಹಣೆಗಾಗಿ 50 ಲಕ್ಷ ರೂ. ವಿವೇಚನಾ ಹಣವನ್ನು ನೀಡಲಾಗಿದೆ. ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಸರಕಾರ ಸಿದ್ಧವಿದೆ. ಇನ್ನು ಹತ್ತರಿಂದ ಹದಿನೈದು ದಿನಗಳಲ್ಲಿ ಮಳೆಯಾಗದಿದ್ದರೆ ತುಂಬ ಕಠಿಣ ಪರಿಸ್ಥಿತಿ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಸರಕಾರವು ಇಸ್ರೋ ಸೇರಿದಂತೆ ಇತರೆ ಸಂಸ್ಥೆಗಳ ಮೂಲಕ ವೈಜ್ಞಾನಿಕ ಸಮೀಕ್ಷೆ ನಡೆಸಿ ಕುಡಿಯುವ ನೀರಿನ ಮೂಲಗಳನ್ನು ಹುಡುಕುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕುಡಿಯುವ ನೀರಿನ ಅಭಾವ ಅಷ್ಟಿಲ್ಲ. ಅವಶ್ಯಕವಿರುವ ಗ್ರಾಮಗಳಿಗೆ ಎರಡು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯ ಸ್ಥಳ ವೀಕ್ಷಣೆ ನಡೆಸುವುದಾಗಿ ತಿಳಿಸಿದರು.

ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ಟಿ.ಎಸ್.ಧರ್ಮರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗನಿ ಅನ್ವರ್ ,ಮುಖಂಡರಾದ ಬಿ.ಎಸ್.ಮಂಜುನಾಥ್, ಪ್ರಕಾಶ್‌ವರ್ಮಾ, ಶಿವಾನಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News