ಕಸಾಪ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆ
ಮಡಿಕೇರಿ, ಎ.11: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿಯ ಪ್ರಥಮ ಸಭೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ನಗರದ ಕೋಟೆ ಆವರಣದಲ್ಲಿರುವ ಕಸಾಪ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಸಾಪ ಭವನ ನಿರ್ಮಾಣ, ಕಸಾಪ ಲೆಕ್ಕಪತ್ರ ಸಮರ್ಪಕ ನಿರ್ವಹಣೆ, ದತ್ತಿನಿಧಿ ಸ್ಥಾಪನೆ ಹಾಗೂ ದತ್ತಿನಿಧಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ನಡೆಸುವುದು, ಕಸಾಪ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಘಟಕದ ಸಮ್ಮೇಳನಗಳನ್ನು ನಿಗದಿತ ಅವಧಿಯಲ್ಲಿ ಆಯೋಜಿಸುವುದು ಮತ್ತಿತರ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಇದಕ್ಕೂ ಮೊದಲು ಕಸಾಪ ಜಿಲ್ಲಾ ಘಟಕದ ನೂತನ ಆಡಳಿತ ಸುಗಮ ಕಾರ್ಯನಿರ್ವಹಣೆ ಸಂಬಂಧಿಸಿದಂತೆ ಅಧ್ಯಕ್ಷ ಲೋಕೇಶ್ ಸಾಗರ್ ಅವರು ನಿಕಟ ಪೂರ್ವ ಅಧ್ಯಕ್ಷರಿಂದ ಹಲವು ಮಾಹಿತಿ ಪಡೆದರು. ನೂತನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕಸಾಪ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಭವನ ನಿರ್ಮಾಣ ಸಂಬಂಧ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಹೇಳಿದರು.
ಈ ದಿಸೆಯಲ್ಲಿ ಕಸಾಪದ ಎಲ್ಲ ಪದಾಧಿಕಾರಿಗಳು ಕೈಜೋಡಿಸುವಂತೆ ಮನವಿ ಮಾಡಿದರು. ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿಯನ್ನು ಕೂಡಲೇ ಒದಗಿಸುವಂತೆ ಲೋಕೇಶ್ ಸಾಗರ್ ತಿಳಿಸಿದರು.
ನಿರ್ದೇಶಕ ಶ್ರೀಧರ್ ನೆಲ್ಲಿತ್ತಾಯ ಅವರು ಹೋಬಳಿ ಮಟ್ಟದ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಕೂಡಲೇ ತಯಾರಿಸಬೇಕಿದೆ. ಅದಕ್ಕೂ ಮೊದಲು ತಾಲೂಕು ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ.ಸುಭಾಷ್ ನಾಣಯ್ಯ, ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಕೋಶಾಧಿಕಾರಿ ಎಸ್.ಎ.ಮುರಳೀಧರ, ಕಸಾಪ ಜಿಲ್ಲಾ ಘಟಕದ ನಿರ್ದೇಶಕ ಕೆ.ಆರ್.ಬಾಲಕೃಷ್ಣ ರೈ, ಕಿಗ್ಗಾಲು ಗಿರೀಶ್, ಅಶ್ವತ್ಥ್ ಕುಮಾರ್, ಕೆ.ಸಿ.ನಂಜುಂಡಸ್ವಾಮಿ, ತೇಲಪಂಡ ಕವನ್ ಕಾರ್ಯಪ್ಪ, ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್, ಮುಲ್ಲೆಂಗಡ ಮಧೂಶ್ ಪೂವಯ್ಯ, ಮಣಜೂರು ಮಂಜುನಾಥ್, ಗೌರಿ, ಕೆ.ಆರ್.ಶಾಲಿನಿ ಮತ್ತಿತರರು ಹಲವು ಮಾಹಿತಿ ನೀಡಿದರು.