×
Ad

ಸಾಗರ: ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆ

Update: 2016-04-11 22:23 IST

ಸಾಗರ,ಎ.11: ರಾಷ್ಟ್ರೀಯ ಹೆದ್ದಾರಿ 206ರ ಅಗಲೀಕರಣ ಕುರಿತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಸ್ತಿ ಕಳೆದುಕೊಳ್ಳುವವರ ಆಕ್ಷೇಪಗಳನ್ನು ವಿಚಾರಣೆ ಮಾಡಲು ಮತ್ತು ಪರಿಹಾರ, ಪುನರ್ವಸತಿ ಕಲ್ಪಿಸುವ ಬಗ್ಗೆ ಸರಕಾರ ಜಿಲ್ಲಾ ಮಟ್ಟದಲ್ಲಿ ವಿಶೇಷ ಅಧಿಕಾರಿ ನೇಮಿಸಿ ಸಂತ್ರಸ್ತರ ಹಿತರಕ್ಷಣೆ ಮಾಡಬೇಕು. ಜಮೀನು ಕಳೆದುಕೊಳ್ಳುವ ರೈತರಿಗೆ ಮಾರುಕಟ್ಟೆ ದರಕ್ಕಿಂತ 50 ಪಟ್ಟು ಹೆಚ್ಚು ಪರಿಹಾರ ನೀಡಬೇಕು ಎಂದು ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ಒಮ್ಮತ ನಿರ್ಣಯ ಕೈಗೊಂಡು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಸ್ವರಾಜ್ ಅಭಿಯಾನ್, ಜೈಕಿಸಾನ್ ಆಂದೋಲನಾ, ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜನಸಂಗ್ರಾಮ ಪರಿಷತ್‌ನಿಂದ ಗಾಂಧಿ ಮೈದಾನದಲ್ಲಿ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 206ರನ್ನು ಬಳಸಿಕೊಂಡು ಹೋಗುವ ತುಮಕೂರು-ಹೊನ್ನಾವರ ರಸ್ತೆ ಅಗಲೀಕರಣ ಕುರಿತು ಹೊರಡಿಸಿರುವ ಅಧಿಸೂಚನೆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ರಸ್ತೆ ಅಕ್ಕಪಕ್ಕದ ರೈತರು ಮತ್ತು ನಿವಾಸಿಗಳನ್ನು ಒಳಗೊಂಡ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವರಾಜ್ ಅಭಿಯಾನದ ಸಂಚಾಲಕ ಶಿವಾನಂದ ಕುಗ್ವೆ, ತಕರಾರು ಸಲ್ಲಿಸಲು ಹೆದ್ದಾರಿ ಪ್ರಾಧಿಕಾರ ನೀಡಿರುವ ಅವಧಿ ತೀರ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆ ವತಿಯಿಂದ ಭೂಮಿ ಕಳೆದುಕೊಳ್ಳುವವರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಚತುಷ್ಪಥ ರಸ್ತೆ ನಿರ್ಮಾಣದ ಹೆಸರಿನಲ್ಲಿ ದತ್ತವಾಗಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ರೈತರ ಸ್ವಾಧೀನದಲ್ಲಿರುವ ಬೆಲೆಬಾಳುವ ಹಾಗೂ ಒಳ್ಳೆಯ ಆದಾಯವಿರುವ ಜಮೀನು, ಬೆಲೆಬಾಳುವ ಕಟ್ಟಡಗಳನ್ನು ಭೂಸ್ವಾಧೀನ ಮಾಡಿಕೊಳ್ಳುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ಬಗ್ಗೆ ಸ್ಥಳೀಯವಾಗಿ ವಾಸಿಸುತ್ತಿರುವವರಿಗೆ ಸರಿಯಾದ ಮಾಹಿತಿಯೇ ಇಲ್ಲ. ವೈಯಕ್ತಿಕ ತಿಳುವಳಿಕೆ ನೀಡದೆ ಹೆದ್ದಾರಿ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿರುವುದು ಖಂಡನೀಯ ಎಂದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ರೈತರಿಗೆ ವರ್ಷದ ಆದಾಯದ 50ಪಟ್ಟು ಪರಿಹಾರ ನೀಡಬೇಕು. ಅಂಗಡಿ ಮುಂಗಟ್ಟು ಕಳೆದುಕೊಳ್ಳುವವರಿಗೆ ಆದಾಯದ 50 ಪಟ್ಟು ಪರಿಹಾರದ ಜೊತೆಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಸರಕಾರ ಮಧ್ಯಪ್ರವೇಶ ಮಾಡಿ, ಸಂತ್ರಸ್ತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಡಿ.ವಸಂತಕುಮಾರ್, ಕಬಸೆ ಅಶೋಕ ಮೂರ್ತಿ, ಸಿರವಂತೆ ಚಂದ್ರಶೇಖರ್, ಪರಮೇಶ್ವರ ದೂಗೂರು, ಟಿ.ಕೆ.ರಾಜಶೇಖರ್, ರಾಜೇಂದ್ರ ಪೈ, ಗುರುಮೂರ್ತಿ ಗೌಡ, ಗಣಪತಿ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News