×
Ad

ಮೇ ತಿಂಗಳಲ್ಲಿ ‘ಜಾತಿ ಸಮೀಕ್ಷಾ’ ವರದಿ ಬಿಡುಗಡೆ

Update: 2016-04-11 23:39 IST

ಬೆಂಗಳೂರು, ಎ. 11: ಸಾಮಾಜಿಕ-ಶೈಕ್ಷಣಿಕ ‘ಜಾತಿ ಸಮೀಕ್ಷಾ’ ವರದಿ ಈ ತಿಂಗಳ ಅಂತ್ಯಕ್ಕೆ ಸಿದ್ಧವಾಗಲಿದ್ದು, ಮೇ ತಿಂಗಳಲ್ಲಿ ಆ ವರದಿಯನ್ನು ಪ್ರಕಟಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆಂಜನೇಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಬಹುತೇಕ ಸಿದ್ಧವಾಗಿದೆ. ಕ್ರೋಡೀಕರಣ ಹಾಗೂ ಮುದ್ರಣ ಕಾರ್ಯ ಶೀಘ್ರದಲ್ಲೆ ಪೂರ್ಣಗೊಳ್ಳಲಿದ್ದು, ಮೇ ಮೊದಲ ವಾರದಲ್ಲಿ ವರದಿ ಬಹಿರಂಗಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಗಳಿಂದ ಮಾಹಿತಿಗಳ ಸಂಗ್ರಹ ವಿಳಂಬ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಕೆಲ ವರದಿ ಪಡೆಯಬೇಕಾಗಿದ್ದರಿಂದ ವರದಿ ಬಿಡುಗಡೆ ವಿಳಂಬವಾಗಿದೆ ಎಂದ ಅವರು, ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಮಿಲ್ಲರ್ ಆಯೋಗ ಸಲ್ಲಿಸಿದ್ದ ವರದಿ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದರೆ ದೇಶದ ಯಾವುದೇ ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯ ನಿಖರ ಮಾಹಿತಿಯೇ ಇಲ್ಲ. ಹೀಗಾಗಿ ಮೀಸಲಾತಿಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ ಎಂದು ಆಂಜನೇಯ ತಿಳಿಸಿದರು.
ಮೇಲ್ಕಂಡ ಎಲ್ಲ ವಿಚಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರಕಾರ ಸಮೀಕ್ಷೆ ನಡೆಸಿದೆ. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯ ಮತ್ತು ವರದಿ ಸಿದ್ಧತೆಯಲ್ಲಿ ಕೊಂಚ ವ್ಯತ್ಯಯವಾಗಿತ್ತು ಎಂದ ಅವರು, ಶೀಘ್ರದಲ್ಲೆ ಸಮೀಕ್ಷಾ ವರದಿ ಬಹಿರಂಗಪಡಿಸಲಾಗುವುದು ಎಂದು ನುಡಿದರು.
ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದವರೂ ಬಡವರೇ. ಹೀಗಾಗಿಯೆ ಬಡವರು ಎಂಬ ಪದಕ್ಕೆ ದಲಿತರು ಎಂಬ ಪರ್ಯಾಯ ಪದ ಹುಟ್ಟಿಕೊಂಡಿದ್ದು, ಸಮೀಕ್ಷಾ ವರದಿಯನ್ನು ಆಧರಿಸಿ ಎಲ್ಲ ಜಾತಿಯ ಬಡವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News