ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ವಿತರಣೆ
ದೊಡ್ಡಬಳ್ಳಾಪುರ,ಎ.11: ಮ್ಯಾನ್ ಹೋಲ್ ದುರಂತದಲ್ಲಿ ಸಾವನ್ನಪ್ಪಿದ ಇಬ್ಬರು ಪೌರ ಕಾರ್ಮಿಕರು ಸೇರಿದಂತೆ ನಾಲ್ವರ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ.ನಂತೆ ಪರಿಹಾರದ ಚೆಕ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೋಮವಾರ ಹಸ್ತಾಂತರಿಸಿದರು. ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಚೆಕ್ ಹಸ್ತಾಂತರಿಸಿದ ಬಳಿಕ ಮಾತನಾಡಿದ ಕೃಷ್ಣಬೈರೇಗೌಡ, ಒಳಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಕಾರ್ಮಿಕರು ಹೆಚ್ಚು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಮುಂಜಾಗ್ರತ ಕ್ರಮಗಳನ್ನು ಕಾರ್ಮಿಕರು ಕಡ್ಡಾಯವಾಗಿ ಪಾಲಿಸಬೇಕು. ಸ್ವಲ್ಪಎಚ್ಚರಿಕೆ ತಪ್ಪಿದರೆ ಇಂತಹ ಅನಾಹುತಗಳಾಗುತ್ತವೆ ಎಂದು ಹೇಳಿದರು.
ಇದೇ ತಿಂಗಳ 3 ರಂದು ದೊಡ್ಡಬಳ್ಳಾಪುರ ನಗರದ ಖಾಸ್‌ಬಾಗ್ ಬಳಿ ಮ್ಯಾನ್ ಹೋಲ್‌ನಲ್ಲಿ ಇಬ್ಬರು ಪೌರ ಕಾರ್ಮಿಕರಾದ ಜಗನ್ನಾಥ್ ಹಾಗೂ ಮುನಿಸ್ವಾಮಿ ಉಸಿರುಗಟ್ಟಿ ಸಾವನ್ನಪ್ಪಿದ್ದರು, ಅವರ ನೆರವಿಗೆ ಧಾವಿಸಿದ ಇಬ್ಬರು ಕೂಲಿ ಕಾರ್ಮಿಕರಾದ ಮುನಿರಾಜು ಹಾಗೂ ಮಧು ಎಂಬುವರು ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
ಚೆಕ್ ವಿತರಿಸುವ ವೇಳೆ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಪಾಲಯ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.