×
Ad

ದಲಿತರ ಮೇಲಿನ ದೌರ್ಜನ್ಯಕ್ಕೆ ಕೇಂದ್ರದ ಬೆಂಬಲ: ನರಸಿಂಹಯ್ಯ

Update: 2016-04-11 23:41 IST

ಬೆಂಗಳೂರು, ಎ.11: ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ನಡೆಸಿದಾಗಿನಿಂದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದ ಪ್ರಧಾನಿ ಮೋದಿ ದಾಳಿಕೋರರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕ ಎನ್.ವಿ.ನರಸಿಂಹಯ್ಯ ಆರೋಪಿಸಿದ್ದಾರೆ.
ದಲಿತ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಧು ಮಿಶ್ರಾ ಹಾಗೂ ಯೋಗಗುರು ರಾಮದೇವ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಸಂಸ ವತಿಯಿಂದ ನಗರದ ಪುರಭವನದ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಬರಿ ಮಸೀದಿಯನ್ನು ಕೆಡವಿ, ರಕ್ತಪಾತ ಹರಿಸಿ ಅಧಿಕಾರದ ರುಚಿ ನೋಡಿರುವ ಬಿಜೆಪಿ, ಅದನ್ನೇ ಮುಂದುವರಿಸಲು ಹವಣಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಿಂಸಾಚಾರಕ್ಕೆ ಹೆಸರುವಾಸಿಯಾಗಿದ್ದು, ಗುಜರಾತ್‌ನಲ್ಲಿ ಮಾಡಿರುವ ನರಹತ್ಯೆಗಳನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ದಲಿತರ ಮೇಲೆ ದಾಳಿ ನಡೆಯುತ್ತಿವೆ ಎಂದು ಅವರು ಕಿಡಿಕಾರಿದರು.
ಸಂಘಪರಿವಾರದವರೆ ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ ಮುಸ್ಲಿಮ್ ಸಮುದಾಯದ ಮೇಲೆ ಆರೋಪಿಸಿದರು. ಅದೇ ರೀತಿಯಲ್ಲಿ ದೇಶದಾದ್ಯಂತ ಅನೇಕ ದಾಳಿಗಳನ್ನು ನಡೆಸುವ ಮೂಲಕ ದೇಶದಲ್ಲಿ ಕೋಮು ದಳ್ಳುರಿಗಳನ್ನು ನಡೆಸಲು ಸಂಚು ರೂಪಿಸುತ್ತಿದೆ. ಇದರ ಹುನ್ನಾರವನ್ನು ಸಾಮಾನ್ಯ ಜನತೆಗೆ ತಿಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ನಾಯಕರು ದಲಿತ ಸಮುದಾಯದ ಕುರಿತು ಮನಸಿಗೆ ಬಂದಂತೆ ನಿಂದಿಸುತ್ತಿದ್ದಾರೆ, ತಮ್ಮ ಬೆಂಬಲಿಗರ ಮೂಲಕ ಹಲ್ಲೆ ಹಾಗೂ ಕೊಲೆಗಳ ನಡೆಸುತ್ತಿದ್ದಾರೆ. ಈ ಬಗ್ಗೆ ದಲಿತ ಸಮುದಾಯದ ಪ್ರಜ್ಞಾವಂತ ಯುವಕರು ಎಚ್ಚೆತ್ತು ಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
 ದಲಿತ ಸಮುದಾಯದ ವಿರುದ್ಧ ಅವಹೇಳನಕಾರಿ ಯಾಗಿ ಮಾತನಾಡಿರುವ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಧು ಮಿಶ್ರಾರವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ಮೂಲಕ ಮುಂದೆಂದೂ ಯಾವ ರಾಜಕೀಯ ನಾಯ ಕರು ದಲಿತರ ವಿರುದ್ಧ ಈ ರೀತಿಯ ಹೇಳಿಕೆಯನ್ನು ನೀಡದಂತೆ ನಿಗಾ ವಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
 ಲೇಖಕ ಶ್ರೀಪಾದ್ ಭಟ್ ಮಾತನಾಡಿ, ಬಾಬರಿ ಮಸೀದಿ ಧ್ವಂಸ, ರಕ್ತಪಾತದ ಪರಿಣಾಮ ಅಧಿಕಾರದ ರುಚಿ ನೋಡಿದ ಬಿಜೆಪಿ, ತನ್ನ ಅಧಿಕಾರದ ದಾಹಕ್ಕಾಗಿ ಎಂತಹದ್ದೇ ದುಷ್ಕೃತ್ಯ ನಡೆಸಲು ಸಿದ್ಧವಿದೆ. ಸಂಘಪರಿವಾರದ ಮನಸುಗಳಲ್ಲಿ ಪ್ರೀತಿ, ವಿಶ್ವಾಸ, ಸೌಹಾರ್ದವನ್ನು ಕಿಂಚಿತ್ತೂ ಹುಡುಕಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ಸಂಘಪರಿವಾರದ ಕೋಮು ರಾಜಕೀಯಕ್ಕೆ ಪರ್ಯಾಯವಾದ ಜನಪರವಾದ ರಾಜಕೀಯ ಶಕ್ತಿ ಇಲ್ಲವಾಗಿದೆ. ಇದರಿಂದಾಗಿ ಕೋಮುವಾದಿಗಳ ದೌರ್ಜನ್ಯಗಳಿಗೆ ಕಡಿವಾಣ ಇಲ್ಲವಾಗಿದೆ. ಆದರೆ, ಪ್ರಸ್ತುತ ಯುವ ಜನತೆ ಜನಪರವಾದ ರಾಜಕೀಯ ಪ್ರಜ್ಞೆಯನ್ನು ಪಡೆಯುತ್ತಿದ್ದು, ಅಧಿಕಾರವನ್ನು ಪಡೆಯುವಂತಹ ಶಕ್ತಿ ಪರಿವರ್ತಿಸುವ ನಿಟ್ಟಿನಲ್ಲಿ ಜನಪರ ಸಂಘಟನೆಗಳು ಟೊಂಕಕಟ್ಟಿ ನಿಲ್ಲಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ರಾಜಶೇಖರ್ ಮೂರ್ತಿ, ಎಸ್‌ಎಫ್‌ಐರಾಜ್ಯಾಧ್ಯಕ್ಷ ಅಂಬರೀಷ್, ಹೋರಾಟಗಾರ ಅನಂತ್‌ನಾಕ್, ದಸಂಸ ಮುಖಂಡರಾದ ಬಿಸನಳ್ಳಿ ಮೂರ್ತಿ, ಸಿದ್ದಾಪುರ ಮಂಜುನಾಥ್, ಪಾರ್ಥಿಬನ್, ಮುನಿನಂಜಪ್ಪ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News