ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪ್ರಿನ್ಸಿಪಾಲರು, ಪೇದೆ ಸಿಐಡಿ ವಶಕ್ಕೆ
ಬೆಂಗಳೂರು, ಎ.11: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪ್ರಾಚಾರ್ಯರು ಹಾಗೂ ಪೊಲೀಸ್ ಪೇದೆಗಳಿಬ್ಬರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ಬಂಧಿತ ದೈಹಿಕ ಶಿಕ್ಷಣ ಶಿಕ್ಷಕರಾದ ಅನಿಲ್ ಮತ್ತು ಸತೀಶ್ ನೀಡಿರುವ ಮಾಹಿತಿ ಆಧರಿಸಿ ತುಮಕೂರು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರು ದೀಕ್ಷಾ ಹಾಗೂ ಮಹೇಶ್ ಕಾಲೇಜಿನ ಪ್ರಾಚಾರ್ಯರು ಎಂದು ಹೇಳಲಾಗುತ್ತಿದೆ. ಆದರೆ, ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಹೇಳಿಕೆಗಳನ್ನಿಟ್ಟುಕೊಂಡು ಪರಾಮರ್ಶೆ ನಡೆಸಲಾಗಿದೆ. ಹೀಗಾಗಿ, ತನಿಖೆಯ ದೃಷ್ಟಿಯಿಂದ ಬಂಧಿತರ ವಿವರ ನೀಡಲು ಸಿಐಡಿ ನಿರಾಕರಿಸಿದೆ. ಆರೋಪಿಗಳು ಇಪ್ಪತ್ತು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಜಾಲದಲ್ಲಿದ್ದು, ಖಾಸಗಿ ಟ್ಯುಟೋರಿಯಲ್‌ಗಳಿಂದ ಪ್ರಭಾವಿ ವ್ಯಕ್ತಿಗಳ ಮಕ್ಕಳಿಗೆ ಅಕ್ರಮವಾಗಿ ಪ್ರಶ್ನೆಪತ್ರಿಕೆಯನ್ನು ಪ್ರಸಾರ ಮಾಡುತ್ತಿದ್ದರು ಎಂದು ಶಂಕಿಸಲಾಗಿದೆ.
ಅದೇ ರೀತಿ, ಬಂಧಿತ ಇಬ್ಬರು ಪೊಲೀಸ್ ಪೇದೆಗಳು ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಹಿರಿಯ ಅಧಿಕಾರಿಗಳ ಸಂಬಂಧಿಕರ ಮಕ್ಕಳಿಗೆ ಪೊರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ತನಿಖೆ ಅಧಿಕಾರಿಗಳು ಶೀಘ್ರದಲ್ಲಿಯೇ ಇನ್ನಷ್ಟು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕಾರಣಿಗಳ ಜೊತೆ ಅನಿಲ್ ನಿಕಟ ಸಂಪರ್ಕ?
ಸಿಐಡಿ ಬಂಧನದಲ್ಲಿರುವ ಸದಾಶಿವನಗರದ ಪ್ರತಿಷ್ಠಿತ ಶಾಲೆ ಎಂಬ ಹೆಸರು ಪಡೆದಿದ್ದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಅನಿಲ್‌ನ ಪೂರ್ವಾಪರವನ್ನು ಸಿಐಡಿ ಜಾಲಾಡಿದ್ದು, ಮೂಲಗಳ ಪ್ರಕಾರ ಅನಿಲ್ ಮಕ್ಕಳ ಮೂಲ ಕವೇ ಇಲ್ಲಿಯ ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಸದಾಶಿವನಗರದಲ್ಲಿರುವ ರಾಜಕಾರಣಿಗಳು ಹಾಗೂ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ತನ್ನ ಕೆಲಸವನ್ನು ಸಾಧಿಸುವ ಜೊತೆಗೆ ಶಿಕ್ಷಕರ ವರ್ಗಾವಣೆಯಲ್ಲೂ ಅನಿಲ್ ಪ್ರಭಾವವಿರುವುದು ತಿಳಿದುಬಂದಿದೆ.