ಕರ್ನಾಟಕದೊಂದಿಗೆ ಒಪ್ಪಂದಕ್ಕೆ ಒಡಿಶಾ ಸರಕಾರ ಉತ್ಸುಕ
ಬೆಂಗಳೂರು, ಎ. 11: ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಸೌಲಭ್ಯಗಳನ್ನು ವಿಸ್ತರಿಸುವ ಸಂಬಂಧ ಆಂಧ್ರ ಪ್ರದೇಶದ ಮಾದರಿಯಲ್ಲಿ ಕರ್ನಾಟಕ ರಾಜ್ಯದೊಂದಿಗೆ ಒಪ್ಪಂದಕ್ಕೆ ಒಡಿಶಾ ಸರಕಾರ ಉದ್ದೇಶಿಸಿದೆ.
ಸೋಮವಾರ ಒಡಿಶಾದ ಕಾರ್ಮಿಕ ಸಚಿವ ಪ್ರಫುಲ್ಲ ಕುಮಾರ್ ಮಲ್ಲಿಕ್, ರಾಜ್ಯಕ್ಕೆ ಭೇಟಿ ನೀಡಿ ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯದ ವಿವಿಧೆಡೆ 5ಲಕ್ಷಕ್ಕೂ ಹೆಚ್ಚು ಮಂದಿ ಒಡಿಶಾದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ವಲಸೆ ಕಾರ್ಮಿಕರ ಸಮೀಕ್ಷೆ, ತಾತ್ಕಾಲಿಕ ವಸತಿ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಫುಲ್ಲ ಕುಮಾರ್ ಮಲ್ಲಿಕ್ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿರುವ ರಾಜ್ಯದ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯಕ್, ಒಡಿಶಾ ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
2016ರ ಜೂನ್‌ನಲ್ಲಿ ಈ ಸಂಬಂಧ ಸಮಾಲೋಚನೆಗೆ ಒಡಿಶಾ ರಾಜ್ಯಕ್ಕೆ ಭೇಟಿ ನೀಡಿ ಒಡಂಬಡಿಕೆ ಅಂತಿಮಗೊಳಿಸಲಾಗುವುದು. ಅಲ್ಲದೆ, ರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ) ಸಹಯೋಗದೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.