×
Ad

ಮುಖ್ಯಕಾರ್ಯದರ್ಶಿಗೆ ಕೇಂದ್ರ ಸಚಿವ ಡಿವಿಎಸ್ ಪತ್ರ

Update: 2016-04-11 23:42 IST

ಬೆಂಗಳೂರು, ಎ.11: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತಿಥಿಗಳ ವಿಶ್ರಾಂತಿಕೊಠಡಿಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ರಾಜ್ಯದ ಡಿಪಿಎಆರ್ ಇಲಾಖೆ ಸಿಬ್ಬಂದಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ.ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದಜಾಧವ್‌ಗೆ ಪತ್ರ ಬರೆದಿರುವ ಸದಾನಂದಗೌಡ, ನಾನು ದಿಲ್ಲಿ ಮತ್ತು ಇತರೆ ರಾಜ್ಯಗಳ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅತಿಥಿಗಳ ವಿಶ್ರಾಂತಿ ಕೊಠಡಿಯಲ್ಲಿ ನಿಮ್ಮಿಂದ ನಿಯೋಜನೆಗೊಂಡ ಸಿಬ್ಬಂದಿ ನಾನು ಪ್ರಯಾಣ ಮಾಡಿದ ದಿನಾಂಕಗಳಂದು ನನ್ನ ಹೆಸರಿನಲ್ಲಿ ಊಟ, ತಿಂಡಿ, ತಿನಿಸುಗಳಿಗಾಗಿ ಬಿಲ್ ಮಾಡಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ನಾನು ವಿಶ್ರಾಂತಿ ಕೊಠಡಿಯಲ್ಲಿ ಯಾವುದೇ ರೀತಿಯ ತಿಂಡಿ, ತಿನಿಸು, ಪಾನೀಯಗಳನ್ನು ಉಪಯೋಗಿಸದಿದ್ದರೂ ನನ್ನ ಹೆಸರಿನ ಮೇಲೆ ಬಿಲ್ ಮಾಡಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಷಯ ಅತೀ ಗಂಭೀರ ವಾಗಿರುವುದರಿಂದ ಇದರ ಬಗ್ಗೆ ತನಿಖೆ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಜೊತೆಗೆ ಸೂಕ್ತ ವರದಿ ನೀಡುವಂತೆ ಸದಾನಂದಗೌಡ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News