×
Ad

ಬುಡಕಟ್ಟು ಜನರ ಬೇಡಿಕೆ ಈಡೇರಿಕೆಗೆ ತುರ್ತು ಕ್ರಮ: ಸಚಿವ ದಿನೇಶ್ ಗುಂಡೂರಾವ್

Update: 2016-04-12 22:04 IST

ಮಡಿಕೇರಿ, ಎ.12: ಐಟಿಡಿಪಿ ಇಲಾಖೆಯ ವ್ಯಾಪ್ತಿಯ ವಸತಿ ಶಾಲೆಗಳ ಸುಧಾರಣೆಗೆ ಅಗತ್ಯ ಕ್ರಮ, ವೀರಾಜಪೇಟೆ ತಾಲೂಕಿನ ದೇವರಪುರ ಗ್ರಾಪಂ ವ್ಯಾಪ್ತಿಯ ಹೆಬ್ಬಾಲೆ ಹಾಡಿಯಲ್ಲಿ ಮೂಲ ಸೌಲಭ್ಯ ಕಲ್ಪಿಸುವುದು, ಲೈನ್ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಒಂದು ತಿಂಗಳಲ್ಲಿ ವಸತಿ ಸೌಲಭ್ಯ ಒದಗಿಸುವುದು ಸೇರಿದಂತೆ ಮೂಲ ನಿವಾಸಿ ಬುಡಕಟ್ಟು ಸಮುದಾಯದವರ ವಿವಿಧ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಲು ಎಲ್ಲ್ಲ ರೀತಿಯ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ 15 ದಿನಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಲು ಹಂತ ಹಂತವಾಗಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಐಟಿಡಿಪಿ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ವಹಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಲಾಗಿದ್ದು, ಈ ಬಗ್ಗೆ ತ್ವರಿತ ಕ್ರಮವಹಿಸಲಾಗುವುದು ಎಂದರು. ವೀರಾಜಪೇಟೆ ತಾಲೂಕಿನ ದೇವರಪುರ ಗ್ರಾಪಂ ವ್ಯಾಪ್ತಿಯ ಹೆಬ್ಬಾಲೆ(ದೇವರಕಾಡು) ಬುಡಕಟ್ಟು ಹಾಡಿಯಲ್ಲಿರುವ 130 ಕುಟುಂಬಗಳಿಗೆ ಕುಡಿಯುವ ನೀರು, ರಸ್ತೆ, ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು. ಹೆಬ್ಬಾಲೆ (ದೇವರಕಾಡು) ಕಾನೂನು ರೀತಿಯಲ್ಲಿ ಸರಕಾರಿ ಜಾಗವಲ್ಲ. ಇದು ಖಾಸಗಿ ಜಾಗವೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಸಂಬಂಧ ಮತ್ತೊಮ್ಮೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕಿದೆ. ಈ ಬಗ್ಗೆ ಕಾನೂನು ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿರುವ ಏಕಲವ್ಯ ಮಾದರಿ ವಸತಿ ಶಾಲೆಗೆ ಇನ್ನಷ್ಟು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಖಾಯಂ ಶಿಕ್ಷಕರನ್ನು ನಿಯೋಜಿಸಿದಲ್ಲಿ ವಸತಿ ಶಾಲೆಗಳನ್ನು ಒಂದು ಹಂತಕ್ಕೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಜಿಪಂ ಸದಸ್ಯ ಪಂಕಜ ಮಾತನಾಡಿ, ಐಟಿಡಿಪಿ ಇಲಾಖೆ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ನಿಲಯಗಳ ಆಡಳಿತ ವ್ಯವಸ್ಥೆ ಚೆನ್ನಾಗಿದೆ. ಆದರೆ ಶಿಕ್ಷಕರು ಗೌರವ ಧನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಫಲಿತಾಂಶದಲ್ಲಿ ಕುಸಿತ ಉಂಟಾಗಿದೆ ಎಂದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯಲ್ಲಿ ಹಲವು ಗಿರಿಜನ ಕುಟುಂಬಗಳು ವಾಸ ಮಾಡುತ್ತಿದ್ದು, ಅಲ್ಲಿಯೂ ದೇವರಕಾಡು ಹೆಸರಿನಲ್ಲಿ ಗಿರಿಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಒಳ್ಳೆಯ ವಕೀಲರನ್ನು ನಿಯೋಜಿಸಿ ಗಿರಿಜನರಿಗೆ ನ್ಯಾಯ ಒದಗಿಸಲು ಶ್ರಮಿಸುವಂತೆ ಅವರು ಸಲಹೆ ನೀಡಿದರು. ಮುಖಂಡ ಆರ್.ಕೆ. ಚಂದ್ರು ಮಾತನಾಡಿ, 2011-12ರಲ್ಲಿ ಬಾಳೆಗುಂಡಿಯ ಹಾಡಿಯ ಜನರಿಗೆ ಅರಣ್ಯ ಹಕ್ಕು ಪತ್ರ ನೀಡಲಾಗಿದೆ. ಇಲ್ಲಿ 175 ಗಿರಿಜನ ಕುಟುಂಬಗಳಿದ್ದು, ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವೀರಾಜಪೇಟೆ ತಾಲೂಕಿನ ದೇವರಪುರ ಪಂಚಾಯತ್ ವ್ಯಾಪ್ತಿಯ ಹೆಬ್ಬಾಲೆ ಬುಡಕಟ್ಟು ಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ತಕ್ಷಣ ಕ್ರಮ ವಹಿಸಲಾಗುವುದೆಂದು ಹೇಳಿದರು.

 ಗಿರಿಜನ ಮಹಿಳೆಯೋರ್ವರು ಮಾತನಾಡಿ, ದೇವರಪುರ ಹಾಡಿಯಲ್ಲಿ ಕುಡಿಯಲು ನೀರು ಇಲ್ಲ, ನಡೆಯಲು ರಸ್ತೆ ಇಲ್ಲ, ಹೆಣ್ಣು ಮಕ್ಕಳಿಗೆ ಶೌಚಾಲಯವಿಲ್ಲ, ಹೀಗೆ ಇವೆಲ್ಲವುಗಳ ನಡುವೆ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇನ್ನು ಮುಂದಾದರೂ ಮೂಲ ನಿವಾಸಿ ಗಿರಿಜನರ ಬಗ್ಗೆ ಕರುಣೆ ಇರಲಿ ಎಂದು ಅಳಲು ತೋಡಿಕೊಂಡರು.

 ಪೊನ್ನಂಪೇಟೆ ಸಮೀಪದ ಅರುವತೋಕ್ಲು ಗ್ರಾಪಂ ವ್ಯಾಪ್ತಿಗೆ ಬರುವ ಹಳ್ಳಿಗಟ್ಟುವಿನ ಬುಡಕಟ್ಟು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಜಿಲ್ಲೆಯ ಕಾಫಿ ಎಸ್ಟೇಟ್‌ಗಳ ಲೈನ್‌ಮನೆಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಿಸುವ ಸಂಬಂಧ ಒಂದು ತಿಂಗಳಲ್ಲಿ ಸರಕಾರಿ ಅಥವಾ ಪೈಸಾರಿ ಜಾಗವನ್ನು ಗುರುತಿಸಿ ವಸತಿ ಸೌಲಭ್ಯವನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು. ಪಾಲಿಬೆಟ್ಟ ವ್ಯಾಪ್ತಿಯ ಲೈನ್ ಮನೆಗಳಲ್ಲಿ ವಾಸ ಮಾಡುವ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಕಳೆದ 4 ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಆದರೆ ಕಂದಾಯ ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ,್ಲ ಜನಪ್ರತಿನಿಧಿಗಳಿಗೆ ಈ ರೀತಿಯಾದರೆ ಸಾಮಾನ್ಯ ಜನರ ಪಾಡೇನು ಎಂದು ಕಾವೇರಿ ಅವರು ಅತೃಪ್ತಿ ವ್ಯಕ್ತಪಡಿಸಿದರು.

ಹಲವರು ಗಿರಿಜನ ಸಂಬಂಧ ಹಲವು ಮಾಹಿತಿ ನೀಡಿದರು. ಇಲಾಖಾಧಿಕಾರಿ ಸತೀಶ್ ಅವರು ಗಿರಿಜನರ ವಿವಿಧ ಬೇಡಿಕೆ ಹಾಗೂ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯೆ ಅಬ್ರಾರ್, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿಪಂ ಸಿಇಒ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News