×
Ad

ಜಗಜೀವನರಾಂರಿಗೆ ಮರಣೋತ್ತರ ಭಾರತ ರತ್ನ ನೀಡಲು ಆದಿ ಜಾಂಭವ ಸಂಘಗಳ ಒಕ್ಕೂಟ ಆಗ್ರಹ

Update: 2016-04-12 22:04 IST

ಮಡಿಕೇರಿ, ಎ.12: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ರಾಜ್ಯ ಆದಿ ಜಾಂಭವ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಸಿ. ಮಹದೇವಯ್ಯ, ದೇಶದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಡಾ. ಬಾಬು ಜಗಜೀವನ ರಾಂ ಅವರಿಗೆ ಭಾರತ ರತ್ನ ನೀಡುವಂತೆ ಎಲ್ಲ ಜಿಲ್ಲಾ ಕೇಂದ್ರಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಗುತ್ತಿದೆ ಎಂದರು. ದೇಶದ ಉಪ ಪ್ರಧಾನಿಯಾಗಿ, ಕೇಂದ್ರ ಸರಕಾರದಲ್ಲಿ ಕಾರ್ಮಿಕ ಖಾತೆಯ ಸಚಿವರಾಗಿ, ಸಮಾಚಾರ ಖಾತೆ ಸಚಿವರಾಗಿ, ಉದ್ಯೋಗ ಮತ್ತು ಪುನರ್ವಸತಿ ಖಾತೆ ಸಚಿವರಾಗಿ ಹಾಗೂ ಆಹಾರ, ಕೃಷಿ ಮತ್ತು ಸಹಕಾರಿ ಖಾತೆಗಳ ನಿರ್ವಹಣೆಯ ಜವಾಬ್ದಾರಿ ಹೊತ್ತ ಅವರು ಸ್ವಾವಲಂಬನೆಯ ಕೃಷಿಯನ್ನು ಪರಿಚಯಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಮಾದರಿಯಾದವರು. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದು, ಪರಿಶಿಷ್ಟ ಜಾತಿಗಳ ಕುರಿತು ಹೆಚ್ಚು ಕಾಳಜಿ ವಹಿಸಿದ್ದರು. ಇತ್ತೀಚೆಗೆ ಬಾಬು ಜಗಜೀವನ ರಾಂ ಅವರಿಗೆ ಗೌರವ ಡಾಕ್ಟರೇಟ್‌ನ್ನು ನೀಡಲಾಗಿದ್ದು, ಎಲ್ಲ ಜಿಲ್ಲೆಗಳಲ್ಲಿ ಇವರ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಸರಕಾರ ಆದೇಶ ನೀಡಿದೆ. ಅಲ್ಲದೆ, ಪ್ರತಿಮೆ ಅನಾವರಣಗೊಳಿಸಿ ಗೌರವಿಸಲಾಗುತ್ತಿದೆ ಎಂದು ಮಹದೇವಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆದಿ ಜಾಂಭವ ಸಂಘದ ರಾಜ್ಯ ಸಂಚಾಲಕ ನಾರಾಯಣ ಮಳವಳ್ಳಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಸ್ಸಿ, ಎಸ್ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾಳಯ್ಯ, ಸಂತ ರವಿದಾಸರ ಸಭಾದ ರಾಜ್ಯಾಧ್ಯಕ್ಷ ಜೆ.ಸಿ. ಇತಿಹಾಸ್, ಪ್ರಮುಖರಾದ ಟಿ.ಎಲ್. ಕುಮಾರ್ ಹಾಗೂ ಜೆ.ಪಿ. ಶ್ರೀನಿವಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News