ಕೊಡಗು ಚಾಂಪಿಯನ್ಸ್ ಲೀಗ್ ಆಟಗಾರರ ಆಯ್ಕೆ
ಸಿದ್ದಾಪುರ, ಎ.12: ಸ್ಥಳೀಯ ಸಿಟಿ ಬಾಯ್ಸಾ ಯುವಕ ಸಂಘದ ವತಿಯಿಂದ ಮೇ 1 ರಿಂದ 5ರ ವರೆಗೆ ನಡೆಯಲಿರುವ ಕೊಡಗು ಚಾಂಪಿಯನ್ಸ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿರುವ ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ಇಲ್ಲಿನ ಪ್ಲಾಟಿನಂ ಪ್ಲಾಝಾ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಪಂದ್ಯಾವಳಿಯಲ್ಲಿ ಭಾಗವಹಿಸಲು 300ಕ್ಕೂ ಹೆಚ್ಚು ಆಟಗಾರರು ಅರ್ಜಿ ಸಲ್ಲಿಸಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ 12 ತಂಡಗಳ ನಾಯಕರು ಮತ್ತು ಮಾಲಕರು ಸೇರಿ ತಮ್ಮ ತಂಡಗಳಿಗೆ ಬೇಕಾದ ತಲಾ 15 ಮಂದಿ ಆಟಗಾರರನ್ನು ಬಿಡ್ ಮಾಡುವುದರ ಮೂಲಕ ಆಯ್ಕೆ ಮಾಡಿದರು. ಜಿಲ್ಲೆಯಲ್ಲಿನ ಅತ್ಯುತ್ತಮ ಆಟಗಾರರಿಗಾಗಿ 12 ತಂಡಗಳು ತೀವ್ರ ಪೈಪೋಟಿ ನಡೆಸಿದ್ದು ವಿಶೇಷವಾಗಿತ್ತು.
ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿರುವ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ 1 ಲಕ್ಷ ರೂ. ನಗದು, ದ್ವಿತೀಯ ಸ್ಥಾನಕ್ಕೆ 50ಸಾವಿರ ರೂ. ನಗದು ಮತ್ತು ಸೆಮಿ ಫೈನಲ್‌ನಲ್ಲಿ ಸೋಲನುಭವಿಸುವ ತಂಡಗಳಿಗೆ ತಲಾ 15ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.