ರಾಜಕೀಯ ತಂತ್ರಗಾರಿಕೆ ಜೋರು-ಗದ್ದುಗೆಯೇರುವವರಾ್ಯರು?
ಬಿ. ರೇಣುಕೇಶ್
ಶಿವಮೊಗ್ಗ, ಎ. 12: ಶಿವಮೊಗ್ಗ ಜಿಲ್ಲಾ ಪಂಚಾಯತ್ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆಯಿರುವ ಬಿಜೆಪಿ ಪಕ್ಷವು, ಅಧಿಕಾರದ ಗದ್ದುಗೆಯೇರಲು ತೀವ್ರ ಕಸರತ್ತು ನಡೆಸುತ್ತಿದೆ. ಮತ್ತೊಂದೆಡೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಸನ್ನಾಹ ಮಾಡುತ್ತಿವೆ. ರಾಜ್ಯ ಸರಕಾರ ಈಗಾಗಲೇ ಮೀಸಲಾತಿ ಪ್ರಕಟಿಸಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಂ ಎ ಮಹಿಳೆಗೆ ಮೀಸಲಿರಿಸಿ ಆದೇಶ ಹೊರಡಿಸಿದೆ. ಆಕ್ಷೇಪಣೆಗೆ ಕಾಲಾವಾಕಾಶ ನೀಡಿದ್ದು, ಪ್ರಸ್ತುತ ನಿಗದಿಯಾಗಿರುವ ಮೀಸಲಾತಿಯಲ್ಲಿ ಬದಲಾವಣೆ ಸಾಧ್ಯತೆಯೇ ಇಲ್ಲವಾಗಿದೆ ಎಂದು ಹೇಳಲಾಗುತ್ತಿದೆ. 31 ಸದಸ್ಯರ ಬಲವಿರುವ ಜಿಪಂ ನಲ್ಲಿ, ಬಹುಮತಕ್ಕೆ 16 ಸದಸ್ಯರ ಬೆಂಬಲ ಅತ್ಯವಶ್ಯಕವಾಗಿದೆ. ಬಿಜೆಪಿ 15, ಕಾಂಗ್ರೆಸ್ 8, ಜೆಡಿಎಸ್ 7 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಅತೀ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಪಕ್ಷಕ್ಕೆ ಅಧಿಕಾರದ ಗದ್ದುಗೆಯೇರಲು ಕೇವಲ ಓರ್ವ ಸದಸ್ಯರ ಕೊರತೆಯಿದೆ. ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್‌ರವರ ಬೆಂಬಲ ಸಿಕ್ಕರೆ, ನಿರಾಯಾಸವಾಗಿ ಬಿಜೆಪಿಗೆ ಅಧಿಕಾರ ಭಾಗ್ಯ ಸಿಗಲಿದೆ. ಇನ್ನೊಂದೆಡೆ ಶತಾಯ ಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ನಿರ್ಧರಿಸಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು, ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿವೆ. ಶಿವಮೊಗ್ಗ ಮಹಾನಗರ ಪಾಲಿಕೆಯ ರೀತಿಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಜಿಪಂ ನಲ್ಲಿಯೂ ಮೈತ್ರಿ ರಾಜಕಾರಣದ ಮೂಲಕ
ಗದ್ದುಗೆಯೇರುವ ಸನ್ನಾಹ ನಡೆಸುತ್ತಿವೆ. ಈ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಬಹುಮತದ ಮ್ಯಾಜಿಕ್ ಸಂಖ್ಯೆ 16ಕ್ಕೆ ಓರ್ವ ಸದಸ್ಯರ ಕೊರತೆ ಬೀಳಲಿದೆ. ಇದಕ್ಕಾಗಿ ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್‌ರವರ ಬೆಂಬಲ ಗಿಟ್ಟಿಸಿಕೊಳ್ಳುವ ಚಿಂತನೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳದ್ದಾಗಿದೆ. ಇದರಿಂದ ಪಕ್ಷೇತರ ಅಭ್ಯರ್ಥಿಯತ್ತ ಸರ್ವರ ಚಿತ್ತ ನೆಟ್ಟಿದೆ.
ಮುಂದೇನು?: ವೇದಾರವರ ಪತಿ ವಿಜಯಕುಮಾರ್‌ರವರು ಪ್ರಸ್ತುತ ಹಾಪ್‌ಕಾಮ್ಸ್ ಅಧ್ಯಕ್ಷರಾಗಿದ್ದು, ಈ ಮೊದಲು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಜಿಪಂ ಚುನಾವಣೆಯಲ್ಲಿ ಹಸೂಡಿ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಬಂಡಾಯವಾಗಿ ಚುನಾವಣಾ ಅಖಾಡಕ್ಕಿಳಿಸಿದ್ದರು. ಪತ್ನಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿದ್ದ ಅಭ್ಯರ್ಥಿ ಪರಾಭವಗೊಂಡಿದ್ದರು. ಒಟ್ಟಾರೆ ಜಿಪಂ ಅಧಿಕಾರ ಗದ್ದುಗೆಯೇರುವವರ್ಯಾರು? ಪಕ್ಷೇತರ ಅಭ್ಯರ್ಥಿಯ ಬೆಂಬಲ ಯಾರಿಗೆ ಸಿಗಲಿದೆ? ಬಿಜೆಪಿಯ ತಂತ್ರಗಾರಿಕೆಯೇನು? ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಯಶ ಸಾಧಿಸಲಿದೆಯೇ? ಎಂಬುದು ಚುನಾವಣಾ ದಿನಾಂಕ ಪ್ರಕಟನೆಯ ನಂತರವಷ್ಟೇ ಸ್ಪಷ್ಟವಾಗಬೇಕಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಬೆಂಬಲ ವ್ಯಕ್ತಪಡಿಸುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಸಂಪರ್ಕಿಸಿದ್ದಾರೆ. ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ತಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೆನೆ
<ವೇದಾ ವಿಜಯಕುಮಾರ್, ಪಕ್ಷೇತರ ಅಭ್ಯರ್ಥಿ
ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ
ಪಕ್ಷದ ವರಿಷ್ಠರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ
<ಎಂ.ಶ್ರೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ
ಕಾದು ನೋಡುವ ತಂತ್ರಗಾರಿಕೆ
ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿಯ ಪ್ರಶ್ನೆಯೇ ಇಲ್ಲ. ಆ ಪಕ್ಷವನ್ನು ಅಧಿಕಾರ ದಿಂದ ದೂರವಿಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಇರಾದೆಯಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದ ನಂತರ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
<ಕಲಗೋಡು ರತ್ನಾಕರ್, ಜಿಪಂ ಸದಸ್ಯ