×
Ad

ತನಿಖೆಗೆ ತಾಳಗುಪ್ಪ ಹಿತರಕ್ಷಣಾ ವೇದಿಕೆ ಒತ್ತಾಯ

Update: 2016-04-12 22:18 IST

ಸಾಗರ, ಎ. 12: ಕಾರ್ಗಲ್‌ನ ಚೈನಾಗೇಟ್ ಮೂಲಕ ಸಾಗರ ನಗರಕ್ಕೆ ಕುಡಿಯುವ ನೀರನ್ನು ತರುವ ಯೋಜನೆಯಡಿ ಹಾಕಿರುವ ಪೈಪ್‌ಲೈನ್ ಕಾಮಗಾರಿಗಳು ತೀರ ಕಳಪೆಯಾಗಿದ್ದು, ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಮಂಗಳವಾರ ತಾಳಗುಪ್ಪ ಗ್ರಾಮ ಹಿತರಕ್ಷಣಾ ವೇದಿಕೆಯಿಂದ ಸಾಗರದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಹೇಶ್ವರ ಗೌಡರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಗಲ್ ಚೈನಾಗೇಟ್‌ನ ಮೂಲಕ ಹಿರೇಮನೆ, ತಾಳಗುಪ್ಪ, ಶಿರವಂತೆ ಮಾರ್ಗವಾಗಿ ಸಾಗರ ನಗರಕ್ಕೆ ಕುಡಿಯುವ ನೀರನ್ನು ತರುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದ್ದು, ತಾಳಗುಪ್ಪ, ಆಲಳ್ಳಿ, ಶಿರವಂತೆ, ಗಾಳಿಪುರ, ಕುಗ್ವೆ ಮೂಲಕ ಪೈಪ್‌ಲೈನ್ ಅಳವಡಿಸಲು ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿಲ್ಲ. ಅಲ್ಲಲ್ಲಿ ಪೈಪ್ ಅಳವಡಿಸುವ ಸಂದರ್ಭದಲ್ಲಿ ಬಿದ್ದಿರುವ ಹೊಂಡಗಳಿಗೆ ಜಾನುವಾರುಗಳು ಬೀಳುತ್ತಿವೆ. ವಾಹನ ಸವಾರರು ಓಡಾಡುವುದು ಸಹ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಪೈಪ್‌ಲೈನ್‌ಗಳನ್ನು ರಾಷ್ಟ್ರೀಯ ಹೆದ್ದಾರಿಯ ಅನುಮತಿ ಪಡೆಯದೆ ರಸ್ತೆ ಬದಿಯಲ್ಲಿಯೇ ಹಾಕಿದ್ದಾರೆ. ರಸ್ತೆ ಅಗಲೀಕರಣವಾದಲ್ಲಿ ಅಳವಡಿಸಿರುವ ಪೈಪ್‌ಲೈನ್‌ಗೆ ಹಾನಿಯಾಗುವುದರಿಂದ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಲಿ ಅಳ

ಡಿಸಿರುವ ಎಂ.ಎಸ್. ಪೈಪ್‌ಗಳು ದೋಷಪೂರಿತವಾಗಿದ್ದು, ನಿಯಮಾವಳಿ ಪ್ರಕಾರ ಪೈಪ್ ಗುಣಮಟ್ಟ ಹೊಂದಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ. ಪೈಪ್‌ಗಳ ಮೇಲಿನ ಕ್ಯೂರಿಂಗ್, ಕೋಟಿಂಗ್ ಸರಿಯಿಲ್ಲ. ಕೋಟಿಂಗ್ ಮಾಡುವಾಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಕಾಮಗಾರಿ ಒಳಗುತ್ತಿಗೆ ನೀಡಿರುವ ಪರಿಣಾಮ ದೊಡ್ಡಮಟ್ಟದ ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇಂಜಿನಿಯರ್‌ಗಳಾದ ಭದ್ರೆಗೌಡ, ಚಂದ್ರಶೇಖರ್, ಸುಹಾಸ್ ಹಣದ ಆಮೀಷಕ್ಕೆ ಒಳಗಾಗಿ ಕಂಪನಿಯ ಪರವಾಗಿ ಅವ್ಯವಹಾರ ಮಾಡಿದ್ದಾರೆ. ಭ್ರಷ್ಟಾಚಾರ ನಡೆಸಿರುವ ಇಂಜಿನಿಯರ್ ವಿರುದ್ಧ ಕ್ರಮ ಜರಗಿಸುವ ಜೊತೆಗೆ ಕಳಪೆ ಕಾಮಗಾರಿ ನಿರ್ವಹಿಸಿರುವ ಸಂಬಂಧಪಟ್ಟ ಕಂಪನಿಯ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರವಿ ಕುಗ್ವೆ, ಗ್ರಾಮ ಸುಧಾರಣಾ ಸಮಿತಿಯ ಎನ್.ಕೆರಿಯಪ್ಪ, ಕೇಶವಮೂರ್ತಿ, ಓಂಕಾರ್, ಜಿ.ಗುರುರಾಜ್, ಹುಚ್ಚಪ್ಪ, ಲಕ್ಷ್ಮಣ, ಗಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News