×
Ad

ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ ಯಶಸ್ವಿ 109 ಪರೀಕ್ಷಾರ್ಥಿಗಳು ಹಾಜರ್, 5 ವಿದ್ಯಾರ್ಥಿಗಳು ಗೈರು

Update: 2016-04-12 22:20 IST

ಸೊರಬ, ಎ. 12: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಯು ಶಿಸ್ತು ಹಾಗೂ ಬಿಗಿ ಭದ್ರತೆಯಲ್ಲಿ ನಡೆಯಿತು. ಈ ಹಿಂದೆ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸುವ ಜೊತೆಗೆ ನೇರವಾಗಿ ಜಿಲ್ಲಾ ಕೇಂದ್ರದ ಮೂಲಕ ಸಿಪಿಐ ಗಣೇಶಪ್ಪ ನೇತೃತ್ವದ ಬಿಗಿ ಪೊಲೀಸ್ ಭದ್ರತೆಯಲ್ಲಿ ಪಟ್ಟಣದ ಹಾಗೂ ತಾಲೂಕಿನ ಆನವಟ್ಟಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳು ರವಾನೆ ಮಾಡಲಾಯಿತು. ಅಮರಜ್ಯೋತಿ ಪಿಯು ಕಾಲೇಜು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆ ತಗೆದುಕೊಂಡಿದ್ದು, ಈ ಪೈಕಿ 109 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, 5 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲಾಡಳಿತದ ಆದೇಶದ ಮೇರೆಗೆ ತಹಶೀಲ್ದಾರ್ ಕವಿತಾ ಯೋಗಪ್ಪನವರ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದರು. ಕ್ಷೇತ್ರ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಪರುಶುರಾಮ್ ಉಸ್ತುವಾರಿಯಲ್ಲಿ, ಕಾಲೇಜಿನ ಪ್ರಾಂಶುಪಾಲ ಕೆ. ಚಿದಂಬರ್ ಮುಖ್ಯ ಅಧೀಕ್ಷಕರಾಗಿ, ಎಂ.ಜಿ. ಮಂಜಪ್ಪ ಸಹಾಯಕ ಮುಖ್ಯ ಅಧಿಕ್ಷಕರಾಗಿ, ಐದು ಕೊಠಡಿಗಳಿಗೆ ಐದು ಮಂದಿ ಮೇಲ್ವಿಚಾಕರಾಗಿ ಕಾರ್ಯನಿರ್ವಹಿಸಿದರು. ಎಎಸ್ಸೈ ರಮೇಶ ಸೇರಿದಂತೆ ಮೂರು ಜನ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಬಿಕಾಂ ಪದವಿಯಲ್ಲಿ ಎ.ಪಿ. ಅಂಕುಶಗೆ ಐದು ಚಿನ್ನ

 ತೀರ್ಥಹಳ್ಳಿ, ಎ. 12: ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾನಿಲಯದ 26ನೆ ಘಟಿಕೋತ್ಸವದಲ್ಲಿ ಕವರಿಹಕ್ಕಲು ಗ್ರಾಮದ ಡಿ.ಎಸ್. ಪ್ರಕಾಶ್ ಹಾಗೂ ಉಷಾ ದಂಪತಿಗಳ ಪುತ್ರಿ ಎ.ಪಿ. ಅಂಕುಶ ಅವರು ಬಿಕಾಂ ಪದವಿಯಲ್ಲಿ ಪ್ರಥಮ ರ್ಯಾಂಕ್‌ನೊಂದಿಗೆ ಐದು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ಇವರು ಬಿಕಾಂ ಪದವಿಯಲ್ಲಿ ಶೇ.95.6 ಅಂಕ (1434/1500) ಅಂಕ ಗಳಿಸಿ ತೀರ್ಥಹಳ್ಳಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಬಿಕಾಂ ಪದವಿಗೆ ಕೊಡಲ್ಪಡುವ ಡಾ. ಡಿ.ಎಂ. ಬಸವರಾಜು ಚಿನ್ನದ ಪದಕ, ದಿ.ಗುರುಮೂರ್ತಿ ಶೆಟ್ಟಿ ಸ್ಮಾರಕ ಚಿನ್ನದಪದಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಚಿನ್ನದ ಪದಕ ಹೀಗೆ ಐದು ಚಿನ್ನದ ಪದಕಗಳನ್ನು ಅಂಕುಶ ಪಡೆದಿದ್ದಾರೆ. ಎ.ಪಿ. ಅಂಕುಶ ಅವರಿಗೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸರಕಾರಿ ಪದವಿಪೂರ್ವ ಕಾಲೇಜು ಅಭಿನಂದನೆಗಳನ್ನು ಸಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News