×
Ad

9.60 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವು

Update: 2016-04-12 22:21 IST

ಶಿವಮೊಗ್ಗ, ಎ. 12: ಯಾರೂ ಇಲ್ಲದ ವೇಳೆ ನೋಡಿಕೊಂಡು ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣವಿಟ್ಟಿದ್ದ ಕಬ್ಬಿಣದ ಟ್ರಜರಿಯನ್ನೇ ಹೊತ್ತೊಯ್ದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ವಿನೋಬನಗರ 60 ಅಡಿ ರಸ್ತೆಯ 13ನೆ ಕ್ರಾಸ್‌ನ ನಿವಾಸಿಯಾದ, ಸಿಡಿವಿಲ್ ಇಂಜಿನಿಯರ್ ನರಸಿಂಹರಾಜು ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಚಿತ್ರದುರ್ಗ ಜಿಲ್ಲೆಯ ಭೀಮನಸಮುದ್ರದಲ್ಲಿರುವ ಸಂಬಂಧಿ ಯೋರ್ವರ ಮನೆಗೆ ತೆರಳಿದ್ದ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಹಿಂಬಾಗಿಲಿನ ಮೂಲಕ ಒಳ ಪ್ರವೇಶಿಸಿರುವ ಕಳ್ಳರು ಕೊಠಡಿಯಲ್ಲಿದ್ದ ಕಬ್ಬಿಣದ ಟ್ರಜರಿ ಅಪಹರಿಸಿದ್ದಾರೆ. ಇದರಲ್ಲಿ ಬಂಗಾರದ ಆಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ಹಳೇಯ ಕಾಲದ ಹಿತ್ತಾಳೆಯ ನಾಣ್ಯಗಳಿದ್ದವು. ಇವುಗಳ ವೌಲ್ಯ 9.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮನೆಯ ಮುಂಬಾಗಿಲು ತೆರೆದಿರುವುದನ್ನು ಗಮನಿಸಿದ ನೆರೆಹೊರೆಯವರು ದೂರವಾಣಿಯ ಮೂಲಕ ನರಸಿಂಹರಾಜುನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News