×
Ad

ಜಾತಿವಾರು ಸಮೀಕ್ಷೆ ಸೋರಿಕೆ ವದಂತಿಗೆ ಕಿವಿಗೊಡದಿರಿ

Update: 2016-04-12 23:07 IST

ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ
ಬೆಂಗಳೂರು, ಎ.12: ಜಾತಿವಾರು ಸಮೀಕ್ಷೆ ವರದಿ ಪೂರ್ಣ ಗೊಳ್ಳುವ ಮೊದಲೇ ವರದಿ ಸೋರಿಕೆಯಾಗಿದೆ ಎಂದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ. ಈ ತಪ್ಪು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವಚನಕಾರ ಹಾಗೂ ನೇಕಾರ ಸಂತ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಸರಕಾರ ನಡೆಸುತ್ತಿರುವ ಜಾತಿವಾರು ಸಮೀಕ್ಷೆ ಇನ್ನು ಪೂರ್ಣಗೊಂಡಿಲ್ಲ. ಆದರೆ ವರದಿ ಸೋರಿಕೆಯಾಗಿದೆ ಎಂದು ಕೆಲ ಜಾತಿ ಜನಗಣತಿ ಜನಸಂಖ್ಯೆಯ ಅಂಕಿ ಅಂಶಗಳನ್ನು ಪ್ರಚಾರ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದರು.
ಸರಕಾರದಿಂದ ಜಾತಿವಾರು ವರದಿ ಬಹಿರಂಗ ಪಡಿಸುವವರೆಗೂ ಜನರು ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ಕಿವಿಗೊಡಬಾರದು. ಈ ವರದಿ ಬಹಿರಂಗವಾದಾಗ ನಿಜಾಂಶ ಬಯಲಾಗಲಿದೆ ಎಂದು ಹೇಳಿದ ಅವರು, ಸರಕಾರ ನಡೆಸಿರುವ ಜಾತಿವಾರು ಸಮೀಕ್ಷೆ ಒಂದು ಉತ್ತಮವಾದ ಕೆಲಸ. ಈ ಸಮೀಕ್ಷೆ ವರದಿಯ ಆಧಾರದಲ್ಲಿ ಮುಂದಿನ ಯೋಜನೆಗಳು ರೂಪಿತವಾಗಲಿವೆ ಎಂದರು.
ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೇವರ ದಾಸಿಮಯ್ಯನವರ ವಚನಗಳು ವಿಶ್ವ ಮಾನ್ಯತೆಯನ್ನು ಪಡೆದು ಕೊಂಡಿವೆ. ಇವರ ವಚನಗಳು ಅನ್ನ ದಾಸೋಹ ಮತ್ತು ಕಾಯಕ ತತ್ವದ ಪರಿಕಲ್ಪನೆಯನ್ನು ಒಳಗೊಂಡಿವೆ. ಈ ಪರಿಕಲ್ಪನೆಗಳು ಪ್ರಸ್ತುತ ಕಾಲದಲ್ಲಿ ಪುನರ್ ವಿಮರ್ಶೆಯಾಗಬೇಕಿದೆ ಎಂದು ಹೇಳಿದರು.
 ತಳ ಸಮುದಾಯಗಳು ಸಾಂಸ್ಕೃತಿಕ ನಾಯಕರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವ ಪರಿಸ್ಥಿತಿಯಿದೆ. ಜಯಂತಿಗಳನ್ನು ಹೆಚ್ಚು ಸಂಭ್ರಮದಿಂದ ಆಚರಣೆ ಮಾಡುವುದರಲ್ಲಿ ಏನೂ ಅರ್ಥವಿಲ್ಲ. ಮೊದಲು ತಳ ಸಮುದಾಯದವರು ಸಂಘಟಿತರಾಗಬೇಕು. ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
  ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ಸಿ.ಕೊಂಡಯ್ಯ ಮಾತನಾಡಿ, ದೇವರ ದಾಸಿಮಯ್ಯ ಜಯಂತಿಯನ್ನು ನೇಕಾರರ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಣೆ ಮಾಡಬೇಕು. ದೇವರ ದಾಸಿಮಯ್ಯ ವಚನಗಳ ಅಧ್ಯಯನ ಪೀಠವನ್ನು ಶೀಘ್ರದಲ್ಲಿ ಸ್ಥಾಪಿಸಿ ಕಾರ್ಯರೂಪಕ್ಕೆ ತರಬೇಕು. ದಾಸಿಮಯ್ಯ ವಚನಗಳು ದೇಶದ ಇತರೆ ಭಾಷೆಗಳಿಗೆ ಅನುವಾದಿಸಿ ಹೆಚ್ಚು ಪ್ರಚಾರಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶರಣ ಮಂಟಪದ ಷ.ಚನ್ನಬಸಪ್ಪ ಪಟ್ಟದೇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಕಾರ್ಯದರ್ಶಿ ಕೆ.ಎ. ದಯಾನಂದ್, ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಉಪಸ್ಥಿತರಿದ್ದರು.

ಲಿಂಗಾಯತ ಸಮುದಾಯದ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದನ್ನು ಸಹಿಸದ ಕಾಂಗ್ರೆಸ್ ಜಾತಿವಾರು ಸಮೀಕ್ಷೆ ವರದಿಯನ್ನು ಸೋರಿಕೆ ಮಾಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿಗೆ ಯಾವುದೇ ಪ್ರಯೋಜನವಿಲ್ಲ.

-ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ

ಜಾತಿಗಣತಿ ಪೂರ್ಣಗೊಳ್ಳುವ ಮೊದಲೇ ಹುಸಿ ಕಲ್ಪಿತ ವರದಿಗಳನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಹೀನಾಯ ಮನಸುಗಳು ನಮ್ಮಲ್ಲಿವೆ. ವರದಿ ಸೋರಿಕೆ ವಿಚಾರ ಕೆಳ ಜಾತಿಗಳ ಸಂಘಟನೆಯನ್ನು ಒಲ್ಲದ ಮನಸುಗಳ ವ್ಯವಸ್ಥಿತ ಪಿತೂರಿ ಇದಾಗಿದೆ.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News