×
Ad

‘ಬರ ಅಧ್ಯಯನ’ ಬಿಜೆಪಿಯ 12 ತಂಡ

Update: 2016-04-12 23:12 IST

ಬೆಂಗಳೂರು, ಎ. 12: ಭೀಕರ ಸ್ವರೂಪದ ಬರ ಪರಿಸ್ಥಿತಿ ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಬರ ಅಧ್ಯಯನಕ್ಕಾಗಿ ಬಿಜೆಪಿ 12 ತಂಡಗಳನ್ನು ರಚಿಸಿದ್ದು, ವಾಸ್ತವಾಂಶದ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲು ತೀರ್ಮಾನಿಸಿದೆ.

ಮಂಗಳವಾರ ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಎಸ್.ಸುರೇಶ್‌ಕುಮಾರ್, ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಲ್ಲಿ ತಹಶಿಲ್ದಾ ರರು ಸೇರಿದಂತೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಆವರಿಸಿದ್ದರೂ, ಸರಕಾರದ ಅಹಂಕಾರದಿಂದ ನಿರಾಸಕ್ತಿ ವಹಿಸಲಾಗಿದೆ. ಬರ ಪೀಡಿತ ಪ್ರದೇಶಗಳ ಜನತೆ, ಜಾನುವಾರುಗಳು ಕುಡಿಯುವ ನೀರು, ಮೇವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಅವರ ನೆರವಿಗೆ ಕೂಡಲೇ ಧಾವಿಸಬೇಕೆಂದು ಅವರು ಆಗ್ರಹಿಸಿದರು.
‘ಕೈ’ಗೆ ತಾಯಿತ ಸೂಕ್ತ: ಮಾಜಿ ಸಿಎಂ ಬಿಎಸ್‌ವೈ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಿಯೋಜನೆಗೊಳ್ಳುತ್ತಿದ್ದಂತೆ ಕಾಂಗ್ರೆಸ್ ನಾಯಕರ ಎದೆಯಲ್ಲಿ ನಡುಕ ಸೃಷ್ಟಿಯಾಗಿದ್ದು, ಅವರೆಲ್ಲ ತಾಯಿತ ಕಟ್ಟಿಕೊಳ್ಳುವುದು ಸೂಕ್ತ ಎಂದು ಸುರೇಶ್ ಕುಮಾರ್ ಲೇವಡಿ ಮಾಡಿದರು.
ಬಿಎಸ್‌ವೈ ಪ್ರವಾಸ ಹೋದ ಕಡೆಗೆಲ್ಲ ಕಾಂಗ್ರೆಸ್ ಪಕ್ಷದ ತಂಡವೂ ತೆರಳಲಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದು, ರಾಜ್ಯದ ಜನತೆ ಬಿಎಸ್‌ವೈ ಅವರನ್ನು ಯಾವ ರೀತಿ ಸ್ವಾಗತ ಮಾಡುತ್ತಾರೆಂದು ಹೋಗಿ ನೋಡಲಿ ಎಂದು ಟೀಕಿಸಿದ ಅವರು, ಬಿಎಸ್‌ವೈ ಬಿಜೆಪಿ ನೂತನ ಅಧ್ಯಕ್ಷರಾಗಿರುವುದು ನಮ್ಮಲ್ಲಿ ಉತ್ಸಾಹ ಮೂಡಿಸಿದೆ ಎಂದರು. ವರದಿ ಸೋರಿಕೆ: ಜಾತಿ ಗಣತಿ ವರದಿ ಪೂರ್ಣಗೊಳ್ಳುವ ಮೊದಲೇ ಸರಕಾರವೇ ವರದಿಯನ್ನು ಸೋರಿಕೆ ಮಾಡಿದೆ ಎಂದು ಸುದ್ಧಿಗೋಷ್ಠಿಯಲ್ಲಿದ್ದ ಶಾಸಕ ಅಶ್ವಥ್ ನಾರಾಯಣ ಆರೋಪಿಸಿದ್ದು, ಸಂಪುಟದಲ್ಲಿ ವರದಿಯನ್ನು ಚರ್ಚಿಸಿದ ಬಳಿಕ ವಿಧಾನಮಂಡಲದಲ್ಲಿ ಮಂಡಿಸಬೇಕಿತ್ತು. ಆದರೆ, ಅದಕ್ಕೂ ಮೊದಲೆ ಸೋರಿಕೆ ಆಗಿರುವುದು ಸಚಿವರ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ ಎಂದು ವ್ಯಂಗ್ಯವಾಡಿದರು.
ದ್ವಿತೀಯ ಪಿಯುಸಿ ರಸಾಯನಶಾಸ ಪ್ರಶ್ನೆ ಪತ್ರಿಕೆ ಎರಡು ಬಾರಿ ಸೋರಿಕೆ ಆಯಿತು. ಜಾತಿ ಗಣತಿ ವರದಿ ಪೂರ್ಣಗೊಳ್ಳುವ ಮೊದಲೇ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಇದೊಂದು ರೀತಿ ‘ಸೋರಿಕೆ ಸರಕಾರ’ವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News