ಮೇಲುಕೀಳೆಂಬ ಮನೋಭಾವವೇ ಸಮ ಸಮಾಜಕ್ಕೆ ಅಡ್ಡಿ: ಸಚಿವ ಪರಮೇಶ್ವರ್
ಬೆಂಗಳೂರು, ಎ.12: ಸಮ ಸಮಾಜ ನಿರ್ಮಾಣ ವಾಗಬೇಕಾದರೆ ಜನರಲ್ಲಿ ಮೇಲು ಕೀಳೆಂಬ ಹಣೆಪಟ್ಟಿಗಳನ್ನು ಕಿತ್ತು ಹಾಕಬೇಕು, ಇಲ್ಲವಾದರೆ ಸಮಾನತೆ ಅಸಾಧ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪರಿಶಿಷ್ಟ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 125ನೆ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಮಾಜದಲ್ಲಿ ನಾವೇ ನಮ್ಮಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದೇವೆ. ಮೊದಲಿಗೆ ಇಂತಹ ಕೀಳು ಮನೋಭಾವ ಹೋಗಲಾಡಿಸಬೇಕು. ಹಾಗೂ ಸಮಾನತೆ ಎನ್ನುವುದು ಒಂದು ವರ್ಗಕ್ಕೆ, ಒಂದು ಧರ್ಮಕ್ಕೆ ಅಥವಾ ಒಂದು ವಿಚಾರಕ್ಕೆ ಸೀಮಿತವಾಗಿರುವುದು ಬೇಡ. ಆ ನಿಟ್ಟಿನಲ್ಲಿ ದಲಿತರಿಗೂ ಆಡಳಿತ, ತೀರ್ಮಾನ ಮಾಡುವ ಶಕ್ತಿ ಸಿಗುವಂತಾಗಬೇಕು. ಇಲ್ಲದೇ ಹೋದರೆ ದಲಿತರು ಎಲ್ಲಿದ್ದರೋ ಅಲ್ಲಿಯೇ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ನಡೆಸಿದ ಹೋರಾಟದ ಹಾದಿಯನ್ನು ಸಮುದಾಯದ ಎಲ್ಲರಿಗೂ ನೆನಪಿಸುವಂತಹ ದಿಕ್ಕಿನಲ್ಲಿ ಜಯಂತಿಗಳನ್ನು ಆಚರಣೆ ಮಾಡಬೇಕಿದೆ. ಹೊರತಾಗಿ ಕೇವಲ ಹೆಸರಿನ ಆಚರಣೆಗೆ ಮಾತ್ರ ಸೀಮಿತವಾಗುವ ಜಯಂತಿಯಾಗಬಾರದು ಎಂದು ತಿಳಿಸಿದರು.
ರಾಜ್ಯದಲ್ಲಿ ನಿನ್ನೆಯಷ್ಟೆ ವರದಿಯಾದ ಜಾತಿಗಣತಿ ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ ಒಂದು ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದು, ಅತೀ ದೊಡ್ಡ ಸಮುದಾಯ ಎಂದೆನಿಸಿಕೊಂಡಿದೆ. ಆದರೂ ಶೋಷಿತರಿದ್ದಾರೆ. ಹೀಗಿರು ವಾಗ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಎಂ.ನರಸಿಂಹಯ್ಯ, ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಡೂರು ನಂಜಪ್ಪ, ಬಿ.ಎನ್.ಮೋಹನ್ ಕುಮಾರ್ ಉಪಸ್ಥಿತರಿದ್ದರು.