ಜಾತಿ ಸಮೀಕ್ಷಾ ವರದಿ ಬಹಿರಂಗ?: ಮಾಧ್ಯಮಗಳ ವರದಿ ಸತ್ಯಕ್ಕೆ ದೂರ - ಸಚಿವ ಆಂಜನೇಯ
ಬೆಂಗಳೂರು, ಎ.12: ಸಾಮಾಜಿಕ- ಶೈಕ್ಷಣಿಕ ‘ಜಾತಿ ಸಮೀಕ್ಷಾ’ ವರದಿಯನ್ನು ಸಮಾಜ ಕಲ್ಯಾಣ ಸಚಿವನಾಗಿರುವ ನಾನೇ ಇನ್ನೂ ನೋಡಿಲ್ಲ. ಆದರೆ, ಈ ಸಂಬಂಧದ ಮಾಧ್ಯಮಗಳಲ್ಲಿನ ವರದಿ ಸತ್ಯಕ್ಕೆ ದೂರ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಸಮೀಕ್ಷಾ ವರದಿ ಮುಂದಿನ ತಿಂಗಳಲ್ಲಿ ಸಲ್ಲಿಕೆಯಾಗಲಿದೆ. ದುರುದ್ದೇಶದಿಂದ ಸಮೀಕ್ಷಾ ವರದಿ ಸೋರಿಕೆ ಮಾಡಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿರಾಕರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಸೋರಿಕೆ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರ ಎಂದ ಅವರು, ಶೀಘ್ರದಲ್ಲೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದರು.
ಕೋರಿಕೆ ಬಂದಿಲ್ಲ: ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಕೋರಿಕೆ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಈವರೆಗೂ ಬಂದಿಲ್ಲ ಎಂದು ಆಂಜನೇಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಜಾತಿ ಗಣತಿ ವರದಿಯನ್ನು ರಾಜ್ಯ ಸರಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಮಾಧ್ಯಮಗಳಲ್ಲಿ ತಮ್ಮದೇ ಆದ ಲೆಕ್ಕಾಚಾರದ ಮೇಲೆ ಜಾತಿ ಗಣತಿ ವರದಿಯನ್ನು ಪ್ರಕಟಿಸಿರುವ ಮಾಹಿತಿ ಅಧಿಕೃತವಲ್ಲ. ಸಮೀಕ್ಷಾ ವರದಿ ಸೋರಿಕೆಯಾಗಿಲ್ಲ.
ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ